Featured, ಅಂಕಣ, ರಾಜ್ಯ

ವಿಶ್ವ ಹಾಲು ದಿನ: ಹೊಸ ಉತ್ಪನ್ನಗಳ ಬಿಡುಗಡೆ ಹಾಗೂ ದಾಖಲೆ ಹಾಲು ಸಂಗ್ರಹಿಸಿದ KMF

ಬೆಂಗಳೂರು, ಜೂನ್ 2 – ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳಿ ನಿಯಮಿತ (KMF) ತನ್ನ ಕೇಂದ್ರ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಸಂದರ್ಭ 18 ಹೊಸ ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ತಿಳಿಸಿದ್ದಾರೆ.

ಹೊಸ ಉತ್ಪನ್ನಗಳಲ್ಲಿ ನಂದಿನಿ ಗುಡ್ ಲೈಫ್ ಮಫಿನ್ಸ್, ಸ್ಟೈಸ್ ಕೇಕ್‌ಗಳು, ಬಾರ್ ಕೇಕ್‌ಗಳು ಸೇರಿದಂತೆ ಹಲವು ಆಕರ್ಷಕ ಆಹಾರ ಪದಾರ್ಥಗಳು ಒಳಗೊಂಡಿವೆ.

ದಾಖಲೆ ಮಟ್ಟದ ಹಾಲು ಸಂಗ್ರಹಣೆ

ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿಲೀಟರ್‌ಗೆ ₹4 ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗಿದ್ದು, ಇದರಿಂದ ಜೂನ್ 1 ರಂದು KMF ಒಂದು ದಿನದಲ್ಲೇ 1.06 ಕೋಟಿ ಲೀಟರ್‌ ಹಾಲು ಸಂಗ್ರಹಿಸಿದೆ, ಇದು ಕಳೆದ ವರ್ಷ (ಜೂನ್ 28 ರಂದು) ದಾಖಲಾದ 1 ಕೋಟಿ ಲೀಟರ್‌ಗೆ ಹೋಲಿಸಿದರೆ ಹೊಸ ಮೈಲಿಗಲ್ಲಾಗಿದೆ.

“ವರ್ಷವಿಡೀ KMF 24 ಸಾವಿರ ಕೋಟಿ ರೂ. ವಹಿವಾಟು ಮಾಡುತ್ತಿದೆ” ಎಂದು ಶಿವಸ್ವಾಮಿ ಅವರು ತಿಳಿಸಿದ್ದಾರೆ.

ಪನೀರ್‌ಗೆ ದೇಶಾದ್ಯಂತ ಬೇಡಿಕೆ

ನಂದಿನಿ ಪನೀರ್ ಉತ್ಪನ್ನಗಳು ಭಾರತದೆಲ್ಲೆಡೆ ಉತ್ತಮ ಗುಣಮಟ್ಟದಿಂದ ಪ್ರಸಿದ್ಧಿಯಾಗಿದ್ದು, ಇದೀಗ ಪನೀರ್ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈ ಯಶಸ್ಸಿಗೆ KMF ಸಿಬ್ಬಂದಿ ಮತ್ತು ಹಾಲು ಉತ್ಪಾದಕರ ಶ್ರಮವೇ ಕಾರಣ ಎಂದು ಅವರು ಹೇಳಿದರು.

ವಿದೇಶಗಳಲ್ಲಿ ಮಾರುಕಟ್ಟೆ ವಿಸ್ತರಣೆ

ನಂದಿನಿ ಬ್ರಾಂಡ್ ಇದೀಗ ದೇಶೀಯ ಮಿತಿಗಳನ್ನು ದಾಟಿ ಅಂತಾರಾಷ್ಟ್ರೀಯ ಮಾರುಕಟ್ಟೆಗೂ ಪ್ರವೇಶ ಮಾಡಿದೆ. “ಇತರೆ ರಾಜ್ಯಗಳಿಗಿಂತ ನಮ್ಮ ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಉತ್ತಮವಾಗಿದೆ” ಎಂದು ಶಿವಸ್ವಾಮಿ ಹೇಳಿದರು.

ಸಾರ್ವಜನಿಕ ಅರಿವು ಅಭಿಯಾನ

ಹಾಲಿನ ಪೋಷಕಾಂಶಗಳ ಮಹತ್ವ ಮತ್ತು ನಂದಿನಿ ಹಾಲು ಸೇವನೆಯಿಂದಾಗುವ ಲಾಭಗಳನ್ನು ಬಗ್ಗೆ ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು KMF ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ “ಒಗ್ಗರಣೆ ಡಬ್ಬಿ” ಖ್ಯಾತಿಯ ಶ್ರೀಮುರಳಿ, ಮಾರುಕಟ್ಟೆ ವಿಭಾಗದ ನಿರ್ದೇಶಕ ರಘುನಂದನ್, ಅಧಿಕಾರಿಗಳಾದ ನವೀನ್, ಪರಮ್ ಸೇರಿದಂತೆ ಹಲವರು ಹಾಜರಿದ್ದರು. ನಂದಿನಿ ಪನೀರ್ ರಾಜ್ಯ ಮಟ್ಟದ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿತ್ತು.

m