Featured, ಇತರೆ, ಸ್ಥಳೀಯ

ಸುಳ್ಯ ತತ್ವಮಸಿ ಟ್ರಸ್ಟ್ ವಂಚನೆ ಪ್ರಕರಣ: ಮೂವರಿಗೆ ಶಿಕ್ಷೆ, ನಾಲ್ವರಿಗೆ ಬಿಡುಗಡೆ

ಸುಳ್ಯ:
ಸುಳ್ಯ ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಸಮೀಪ ಅಂಬಡೆಡ್ಕ ಪ್ರದೇಶದಲ್ಲಿರುವ ಸಮೃದ್ಧಿ ಕಾಂಪ್ಲೆಕ್ಸ್ ನಲ್ಲಿ 2013ರಲ್ಲಿ “ಶ್ರೀ ತತ್ವಮಸಿ ಚಾರಿಟೇಬಲ್ ಟ್ರಸ್ಟ್ (ರಿ.)” ಮತ್ತು “ಶ್ರೀ ತತ್ವಮಸಿ ಎಂಟರ್‌ಪ್ರೈಸಸ್ (ರಿ.)” ಎಂಬ ಹೆಸರಿನಲ್ಲಿ ಸಂಸ್ಥೆ ಪ್ರಾರಂಭಿಸಲಾಯಿತು. ಸದರಿ ಸಂಸ್ಥೆಯವರು ಸುಳ್ಯ ಪೇಟೆಯ ಗಾಂಧಿನಗರದಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿಯನ್ನು ತೆರೆದು “ಬೆನಿಫಿಟ್ ಸ್ಟೀಂ” ಎಂಬ ಯೋಜನೆಯನ್ನು ಆರಂಭಿಸಿ, ಏಜೆಂಟರ ಮೂಲಕ ಸಾವಿರಾರು ಜನರನ್ನು ಸದಸ್ಯರನ್ನಾಗಿ ಸೇರಿಸಿಕೊಂಡು ಅವರಿಂದ ಕೋಟ್ಯಾಂತರ ಹಣವನ್ನು ಸಂಗ್ರಹಿಸಿದ್ದರು.

ಸದರಿ ಸಂಸ್ಥೆ ರೂ. 3,08,62,500 ಮೊತ್ತದ ಹಣವನ್ನು ಸದಸ್ಯರಿಗೆ ವಾಪಸ್ ನೀಡದೆ ಅಥವಾ ಯಾವುದೇ ವಸ್ತು ಒದಗಿಸದೆ ವಂಚನೆ ನಡೆಸಿದ ಆರೋಪದ ಮೇರೆಗೆ, ಸುಳ್ಯ ಪೊಲೀಸ್ ಠಾಣೆಯಲ್ಲಿ ಅಕ್ರ: 248/2014 ರಂತೆ ಪ್ರಕರಣ ದಾಖಲಿಸಲಾಯಿತು. ತನಿಖೆ ಪೂರ್ಣಗೊಳಿಸಿದ ಸುಳ್ಯ ಠಾಣಾಧಿಕಾರಿಗಳು ಒಟ್ಟು 8 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಶ್ರೀ ಬಿ. ಮೋಹನ್ ಬಾಬು ಅವರ ಸಮ್ಮುಖದಲ್ಲಿ ನಡೆಯಿತು. ವಿಚಾರಣೆಯ ಅಂತ್ಯದಲ್ಲಿ ದಿನಾಂಕ 30-10-2025 ರಂದು ತೀರ್ಪು ಪ್ರಕಟಗೊಂಡಿತು.

ಆರೋಪಿಗಳ ಪೈಕಿ 2ನೇ, 4ನೇ ಮತ್ತು 5ನೇ ಆರೋಪಿಗಳ ವಿರುದ್ಧ ಅಪರಾಧ ಸಾಬೀತಾಗಿದ್ದು, ಅವರಿಗೆ ಕೆಳಗಿನಂತೆ ಶಿಕ್ಷೆ ವಿಧಿಸಲಾಗಿದೆ ಭಾ.ದಂ.ಸಂ.ಕಲಂ  406 ಓದಿನ 149 ರಂತೆ: 3 ವರ್ಷಗಳ ಸಾದಾ ಕಾರಾಗೃಹ ಕಲಂ 409 ಹಾಗೂ 420 ಓದಿನ 149 ರಂತೆ :  ಪ್ರತಿ ಕಲಂಗೆ 3 ವರ್ಷಗಳ ಸಾದಾ ಕಾರಾಗೃಹ ಹಾಗೂ ₹10,000 ದಂಡ ದಂಡ ಪಾವತಿಸಲು ವಿಫಲರಾದಲ್ಲಿ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಕಾರಾಗೃಹ

ಉಳಿದ 3ನೇ, 6ನೇ, 7ನೇ ಮತ್ತು 8ನೇ ಆರೋಪಿಗಳ ವಿರುದ್ಧ ಅಪರಾಧ ಸಾಬೀತಾಗದ ಕಾರಣ ಅವರನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ.
1ನೇ ಆರೋಪಿ ಮರಣಹೊಂದಿರುವುದರಿಂದ, ಅವರ ಮೇಲಿನ ವಿಚಾರಣೆ ಸ್ಥಗಿತಗೊಳಿಸಲಾಗಿದೆ.

ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರಮೇಶ್ ವಾದ ಮಂಡಿಸಿದ್ದರು