ಇತರೆ

ಪ್ರೀತಿಸಿ ಮದುವೆಯಾಗಿದ್ದ ದಂಪತಿ ಅನುಮಾನಾಸ್ಪದ ಸಾವು: ಪತ್ನಿ ಹತ್ಯೆಗೈದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ.!?

ಬೆಂಗಳೂರು, ಆಗಸ್ಟ್ 15: ಪ್ರೀತಿಸಿ ಮದುವೆಯಾಗಿದ್ದ ದಂಪತಿ ಅನುಮಾನಾಸ್ಪದ ರೀತಿಯಲ್ಲಿ ಮನೆಯಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಮಂತ್ ಜೈನ್ (32) ಹಾಗೂ ಹುಬ್ಬಳ್ಳಿ ಮೂಲದ ಪದ್ಮಾವತಿ (29) ಮೃತ ದಂಪತಿ.

ಸುಮಂತ್ ಜೈನ್ ನಂದಿನಿ ಲೇಔಟ್‌ನಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಪದ್ಮಾವತಿ ವೈಟ್‌ಫೀಲ್ಡ್‌ನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಪ್ರೇಮ ವಿವಾಹ

ಸುಮಂತ್ ಜೈನ್ ಹಾಗೂ ಪದ್ಮಾವತಿ ಪರಸ್ಪರ ಪ್ರೀತಿಸುತ್ತಿದ್ದು, ಸುಮಾರು ನಾಲ್ಕು ವರ್ಷಗಳ ಹಿಂದೆ ಕುಟುಂಬದ ಒಪ್ಪಿಗೆಯೊಂದಿಗೆ ವಿವಾಹವಾಗಿದ್ದರು. ಬಳಿಕ ದಂಪತಿ ಲಗ್ಗೆರೆ ಸಮೀಪದ ರಾಜೇಶ್ವರಿ ನಗರದ ಬ್ಯಾಂಕ್ ಲೇಔಟ್‌ನಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅಗಸ್ಟ್  14ರ ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಮಾಹಿತಿ ಪಡೆದ ರಾಜಗೋಪಾಲನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಅಸಹಜ ಸಾವು ಪ್ರಕರಣ (UDR) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪತ್ನಿಯನ್ನು ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಸುಮಂತ್ ಜೈನ್ ತನ್ನ ಪತ್ನಿಯನ್ನು ಹತ್ಯೆಗೈದು ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯನ್ನು ಪೊಲೀಸರು ಶಂಕಿಸಿದ್ದಾರೆ. ಆದರೆ ದಂಪತಿಯ ಸಾವಿಗೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ. ಮರಣೋತ್ತರ ಪರೀಕ್ಷೆಯ ವರದಿ, ಸ್ಥಳದಲ್ಲಿನ ಸಾಕ್ಷ್ಯಗಳು ಹಾಗೂ ತನಿಖೆಯ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಆಗಸ್ಟ್ 13ರಿಂದಲೇ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ವೇಳೆ ಪದ್ಮಾವತಿ ತಮ್ಮ ತಾಯಿಗೆ ವಾಟ್ಸ್ಆ್ಯಪ್ ಮೂಲಕ ಸಂದೇಶ ಕಳುಹಿಸಿ, ತಾನು ಸಾಯುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಲ್ಲದೆ, ಮದುವೆ ವೇಳೆ ನೀಡಲಾಗಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರು ಎನ್ನಲಾಗಿದೆ. ಇದೇ ವೇಳೆ ಸುಮಂತ್ ಜೈನ್ ಕೂಡ ತಮ್ಮ ಕುಟುಂಬಸ್ಥರಿಗೆ ಸಂದೇಶ ಕಳುಹಿಸಿ, ತಮ್ಮ ಪಿಎಫ್ ಹಣ ಹಾಗೂ ಮನೆಯಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಪತ್ನಿ ‘ಈ ಮನೆ ನನ್ನದು’ ಎಂದು ಹೇಳಿಕೊಂಡು ಜಗಳ ಮಾಡುತ್ತಿದ್ದಾಳೆ ಎಂಬ ಅರ್ಥದ ಸಂದೇಶವನ್ನೂ ಸುಮಂತ್ ಕುಟುಂಬಸ್ಥರಿಗೆ ಕಳುಹಿಸಿದ್ದರು ಎನ್ನಲಾಗಿದೆ.

ದಂಪತಿ ಕುಟುಂಬಸ್ಥರಿಗೆ ಕಳುಹಿಸಿದ್ದಾರೆ ಎನ್ನಲಾದ ಈ ಸಂದೇಶಗಳು ಪ್ರಕರಣದ ತನಿಖೆಯಲ್ಲಿ ಪ್ರಮುಖ ಸಾಕ್ಷ್ಯಗಳಾಗಿವೆ. ಜಗಳಕ್ಕೆ ನಿಖರ ಕಾರಣವೇನು, ಇಬ್ಬರ ನಡುವೆ ಏನಾಗಿತ್ತು ಹಾಗೂ ದಂಪತಿಯ ಸಾವಿನ ನಡುವಿನ ಸಂಬಂಧವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಮೊಬೈಲ್ ಸಂದೇಶಗಳ ಪರಿಶೀಲನೆ, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಘಟನಾ ಸ್ಥಳದಲ್ಲಿ ದೊರೆತ ಸಾಕ್ಷ್ಯಗಳ ಆಧಾರದ ಮೇಲೆ ಪ್ರಕರಣದ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

m