ಇತರೆ

ಶಿಕ್ಷಕಿಯ ಹಲ್ಲೆಯಿಂದ ಯುಕೆಜಿ ಬಾಲಕ ಸಾವು? — ಸಿಸಿಟಿವಿ ದೃಶ್ಯ ವೈರಲ್, ಪೊಲೀಸರಿಂದ ತನಿಖೆ

ಶಾಖಪಟ್ಟಣಂ: ಹೋಮ್‌ವರ್ಕ್ ಪರಿಶೀಲಿಸುವಾಗ ಶಿಕ್ಷಕಿಯೊಬ್ಬರು ತರಗತಿಯಲ್ಲೇ 6 ವರ್ಷದ ಬಾಲಕನನ್ನು ಬಟ್ಟೆ ಕಳಚಲು ಯತ್ನಿಸಿ, ಕೆನ್ನೆಗೆ ಹೊಡೆದ ಪರಿಣಾಮ ಆತ ಸಾವನ್ನಪ್ಪಿರುವ ಭೀಕರ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ‘ಒನ್ ಟೌನ್’ ಪ್ರದೇಶದಲ್ಲಿ ಗುರುವಾರ (ಆಗಸ್ಟ್ 20) ಸಂಭವಿಸಿದೆ.

ಲಿಟಲ್ ಗಾರ್ಡನ್ಸ್ ಶಾಲೆಯ ಯುಕೆಜಿ ವಿದ್ಯಾರ್ಥಿ ಪ್ರಣಯ್ ತೇಜ (ಹೆಸರು) ಶಿಕ್ಷಕಿಯ ಹಲ್ಲೆಗೆ ಒಳಗಾಗಿ ಮೃತಪಟ್ಟಿರುವ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಪೋಷಕರು ಆತನನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಿದ್ದರು. ಆದರೆ, ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಶಿಕ್ಷಕಿಯ ಹಲ್ಲೆಯೇ ಮಗುವಿನ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿರುವ ಪೋಷಕರು ಹಾಗೂ ಸಂಬಂಧಿಕರು, ಘಟನೆಯಲ್ಲಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಸ್ಪತ್ರೆಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಈ ನಡುವೆ ಶಾಲೆಯ ತರಗತಿ ಕೊಠಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಘಟನೆ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ಹೋಮ್‌ವರ್ಕ್ ಪರಿಶೀಲನೆ ವೇಳೆ ಶಿಕ್ಷಕಿ ಬಾಲಕನನ್ನು ಅವಮಾನಿಸುವ ರೀತಿಯಲ್ಲಿ ಆತನ ಬಟ್ಟೆ ತೆಗೆಯಲು ಯತ್ನಿಸಿ, ಆತನನ್ನು ತನ್ನ ಬಳಿಗೆ ಎಳೆದಿದ್ದಾರೆ ಎನ್ನಲಾಗಿದೆ. ಬಾಲಕ ಅಳುತ್ತಾ ಪ್ರತಿರೋಧಿಸಿದ ಸಂದರ್ಭದಲ್ಲಿ ಶಿಕ್ಷಕಿ ಆತನ ಕೆನ್ನೆಗೆ ಬಲವಾಗಿ ಹೊಡೆದಿರುವುದು ದೃಶ್ಯಾವಳಿಯಲ್ಲಿ ಕಂಡುಬರುತ್ತದೆ ಎಂದು ವರದಿಯಾಗಿದೆ. ಹೊಡೆತದ ಬಳಿಕ ಬಾಲಕ ಕೆಲ ಕ್ಷಣ ನಿಂತುಕೊಂಡಿದ್ದು, ನಂತರ ಶಿಕ್ಷಕಿಯ ಮೇಲೆಯೇ ಕುಸಿದುಬಿದ್ದಿರುವುದು ಸಿಸಿಟಿವಿ ದೃಶ್ಯದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಘಟನೆ  ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿ, ಸಾಕ್ಷಿಗಳ ಹೇಳಿಕೆಗಳು ಹಾಗೂ ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ  ಸಂಪೂರ್ಣ ಸತ್ಯಾಸತ್ಯತೆ ಪೊಲೀಸ್ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸ್ಪಷ್ಟವಾಗಬೇಕಿದೆ.

m