ಇತರೆ

ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಆರೋಪ: ಬಿಹಾರ ಮೂಲದ ಯುವಕರು ಪೊಲೀಸ್ ವಶಕ್ಕೆ

ಬೆಂಗಳೂರು: ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಆರೋಪದ ಮೇಲೆ ಬಿಹಾರ ಮೂಲದ ಕೆಲ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹುಂಡೈ ವೆನ್ಯೂ ಕಾರಿನಲ್ಲಿ ಬಂದಿದ್ದ ಆರೋಪಿಗಳು ದಾಸರಹಳ್ಳಿ ಕಡೆಯಿಂದ ಯುವತಿಯನ್ನು ಕರೆದೊಯ್ಯುತ್ತಿದ್ದರೆನ್ನಲಾಗಿದೆ. ಈ ವೇಳೆ ಯುವತಿ ಕಿರುಚಾಡುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ಕಾರನ್ನು ತಡೆಯಲು ಮುಂದಾಗಿದ್ದಾರೆ.
ಸಾರ್ವಜನಿಕರು ಹಿಂಬಾಲಿಸುತ್ತಿದ್ದಂತೆ ಆರೋಪಿಗಳು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ನಾಲ್ಕೈದು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಕಾರನ್ನು ತಡೆಯಲು ಮುಂದಾದ ಸಾರ್ವಜನಿಕರ ಮೇಲೂ ಹಲ್ಲೆಗೆ ಯತ್ನಿಸಿದ ಆರೋಪ ಕೇಳಿಬಂದಿದ್ದು, ಮಾರಕಾಸ್ತ್ರ ಬಳಸಿ ಹಲ್ಲೆಗೆ ಮುಂದಾಗಿದ್ದರು ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಘಟನೆಯನ್ನು ಗಮನಿಸಿದ ಸಾರ್ವಜನಿಕರು ಕಾರನ್ನು ಹಿಂಬಾಲಿಸಿ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾಹಿತಿ ತಿಳಿದು ಮಾಗಡಿ ರಸ್ತೆ ಹಾಗೂ ವಿಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸದ್ಯ ಯುವತಿ ಹಾಗೂ ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದ್ದು, ಮೇಲ್ನೋಟಕ್ಕೆ ಆರೋಪಿಗಳು ಬಿಹಾರ ಮೂಲದ ಯುವಕರು ಎಂದು ತಿಳಿದುಬಂದಿದೆ. ವಿಜಯನಗರ ಎಸಿಪಿ ನೇತೃತ್ವದಲ್ಲಿ ವಿಚಾರಣೆ ಮುಂದುವರಿದಿದೆ.

ಈ ಕುರಿತು ಪ್ರತ್ಯಕ್ಷದರ್ಶಿಗಳಾದ ದೀಪಕ್ ಹಾಗೂ ಕಿರಣ್ ಮಾತನಾಡಿ, ಯುವತಿಯನ್ನು ಕಟ್ಟಡವೊಂದರಿಂದ ಕಾರಿನಲ್ಲಿ ಕರೆದುಕೊಂಡು ಬರುತ್ತಿದ್ದಾಗ ಆಕೆ ಕಿರುಚಾಡುತ್ತಿರುವುದನ್ನು ಗಮನಿಸಿ ಪ್ರಶ್ನಿಸಲು ಮುಂದಾದೆವು. ಈ ವೇಳೆ ಆರೋಪಿಗಳು ಕಾರನ್ನು ವೇಗವಾಗಿ ಚಲಾಯಿಸಿ ನಾಲ್ಕೈದು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದರು. ಬಳಿಕ ಹಿಂಬಾಲಿಸಿ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾಗಿ ತಿಳಿಸಿದ್ದಾರೆ.
ಘಟನೆಯ ನಿಖರ ಕಾರಣ ಹಾಗೂ ಯುವತಿ ಮತ್ತು ಆರೋಪಿಗಳ ನಡುವಿನ ಸಂಬಂಧದ ಕುರಿತು ಪೊಲೀಸ್ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ