ಸುಳ್ಯ: ಧ್ವನಿ, ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ (ರಿ.), ಸುಳ್ಯ ಇದರ 12ನೇ ವಾರ್ಷಿಕೋತ್ಸವದ ಅಂಗವಾಗಿ ಪುರುಷರ ವಿಭಾಗದ ಅಂತರರಾಜ್ಯ ಮಟ್ಟದ ಕಬ್ಬಡಿ ಪಂದ್ಯಾಟ ಅಕ್ಟೋಬರ್ 3 ಮತ್ತು 4ರಂದು ಸುಳ್ಯದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ (AKFI) ನಿಯಮಾವಳಿಗಳನ್ವಯ ಪಂದ್ಯಾಟವನ್ನು ಆಯೋಜಿಸಲಾಗುತ್ತಿದ್ದು, ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ದೆಹಲಿ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳ ಹೆಸರಾಂತ ತಂಡಗಳು ಭಾಗವಹಿಸಲಿವೆ. ಪಂದ್ಯಾಟ ವೀಕ್ಷಿಸಲು ಸುಮಾರು 3,000 ಪ್ರೇಕ್ಷಕರಿಗೆ ಗ್ಯಾಲರಿ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಸುಮಾರು 500 ಮಂದಿಗೆ ಆಸನದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಆಟಗಾರರು ಹಾಗೂ ಪ್ರೇಕ್ಷಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮೈದಾನದಲ್ಲಿ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ.
ಎರಡು ದಿನಗಳ ಕಾಲ ನಡೆಯಲಿರುವ ಪಂದ್ಯಾಟವನ್ನು ಯಶಸ್ವಿಯಾಗಿ ನಡೆಸಲು ಸಂಘದ ಪದಾಧಿಕಾರಿಗಳು ಹಾಗೂ ಸಂಘಟಕರು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದಾರೆ.



