ಇತರೆ

ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್‌ಗೆ ಯೆನೆಪೋಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್

16ನೇ ಘಟಿಕೋತ್ಸವದಲ್ಲಿ ಪ್ರದಾನ; ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದ ಸಾಧಕ ಡಾ. ಸುಧೀರ್ ಶ್ರೀವಾಸ್ತವ ಅವರಿಗೂ Honoris Causa

ಮಂಗಳೂರು: ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಅಮೂಲ್ಯ ಸೇವೆ ಮತ್ತು ಸಮಾಜಕ್ಕೆ ನೀಡಿರುವ ಮಹತ್ವದ ಕೊಡುಗೆಗಳನ್ನು ಗುರುತಿಸಿ, ಖ್ಯಾತ ಇಸ್ಲಾಮಿಕ್ ವಿದ್ವಾಂಸ ಹಾಗೂ ಜಾಮಿಯಾ ಮರ್ಕಝು ಸಕ್ಷಾಫತಿ ಸುನ್ನಿಯ್ಯಾ ಸಂಸ್ಥಾಪಕ–ಕುಲಾಧಿಪತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರಿಗೆ ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಗೌರವ ಡಾಕ್ಟರೇಟ್ (Honoris Causa) ಪ್ರದಾನ ಮಾಡಲಿದೆ.

ಯೆನೆಪೋಯ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವವು 24ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ದೇರಳಕಟ್ಟೆಯ ಯೆನ್‌ಡ್ಯೂರೆನ್ಸ್ ಝನ್ನಲ್ಲಿ ನಡೆಯಲಿದೆ. ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಘಟಿಕೋತ್ಸವ ಭಾಷಣವನ್ನು ಶಿಕ್ಷಣ ಸಚಿವಾಲಯದ NEP-2020 ಪರಿಶೀಲನಾ ಸಮಿತಿಯ ಅಧ್ಯಕ್ಷ ಪ್ರೊ. ಜಗದೀಶ್ ಕುಮಾರ್ ಮಾಮಿಡಾಲ ಅವರು ನೆರವೇರಿಸಲಿದ್ದಾರೆ. ಅವರು ಐಐಎಂ ಕಲ್ಕತ್ತಾದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದು, ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (UGC)ನ ಮಾಜಿ ಅಧ್ಯಕ್ಷರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಹಾಗೂ ಐಐಟಿ ದೆಹಲಿಯ ಪ್ರಾಧ್ಯಾಪಕರಾಗಿದ್ದಾರೆ. ಅವರು ಪದ್ಮಶ್ರೀ ಪುರಸ್ಕೃತರೂ ಆಗಿದ್ದಾರೆ.

ಘಟಿಕೋತ್ಸವದಲ್ಲಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರೊಂದಿಗೆ ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದ ಸಾಧಕ, ಎಸ್.ಎಸ್. ಇನ್ನೋವೇಷನ್ಸ್ ಇಂಟರ್ನ್ಯಾಷನಲ್ Inc. ಸಂಸ್ಥಾಪಕ, ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧೀರ್ ಶ್ರೀವಾಸ್ತವ ಅವರಿಗೂ ಗೌರವ ಡಾಕ್ಟರೇಟ್ (Honoris Causa) ಪ್ರದಾನ ಮಾಡಲಾಗುವುದು.

ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ಕೇರಳದ ಕೋಝಿಕ್ಕೋಡ್‌ನ ಜಾಮಿಯಾ ಮರ್ಕಝು ಸಕ್ಷಾಫತಿ ಸುನ್ನಿಯ್ಯಾ (ಜಾಮಿಯಾ ಮರ್ಕಝ್) ಸಂಸ್ಥೆಯ ಸ್ಥಾಪಕ ಹಾಗೂ ಕುಲಾಧಿಪತಿಯಾಗಿದ್ದು, ಶಿಕ್ಷಣ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಸ್. ಗಂಗಾಧರ ಸೋಮಯಾಜಿ ಅವರು ವಿಶ್ವವಿದ್ಯಾಲಯದ ವಾರ್ಷಿಕ ವರದಿಯನ್ನು ಮಂಡಿಸಲಿದ್ದಾರೆ.