(ಇವಾರ್ತೆ ಡೆಸ್ಕ್): ಅಕ್ಟೋಬರ್ 18.
ಸುಳ್ಯ : ಕೇರಳದ ನೆಡುಂಬಸ್ಸೇರಿಯಲ್ಲಿ ಮಿನಿ ಕೂಪರ್ ಕಾರು ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ಮೂವರು ಯುವಜನರ ಕುಟುಂಬಸ್ಥರು ಇದೀಗ ಒಂದಾಗಿ ಕಾನೂನು ಹೋರಾಟ ನಡೆಸಲು ಸಜ್ಜಾಗಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಸುಳ್ಯ ಮೂಲದ ಇಯಾಸ್, ವಯನಾಡಿನ ದೇವಿಕಾ ಹಾಗೂ ಪಾಲಕ್ಕಾಡ್ನ ಗೋಪಿಕಾ

ಅವರ ಕುಟುಂಬಸ್ಥರು ಪರಸ್ಪರ ಕೈಜೋಡಿಸಿ, ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಳ್ಳಲು ಸಂಘಟಿತ ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಮೃತ ಇಯಾಸ್ ಅವರ ತಂದೆ ಇಬ್ರಾಹಿಂ, ಮಾವ ಬಾತಿಷಾ ಕೆ.ಬಿ., ಚಿಕ್ಕಪ್ಪ ಲತೀಫ್ ಪಿ.ಎ. ಹಾಗೂ ಕನಕಮಜಲಿನ ಇಕ್ಬಾಲ್ ಟಿ.ಎಂ. ಅವರು ಅಪಘಾತದಲ್ಲಿ ಮೃತಪಟ್ಟ ದೇವಿಕಾ ಮತ್ತು ಗೋಪಿಕಾ ಅವರ ಮನೆಗಳಿಗೆ ಭೇಟಿ ನೀಡಿ, ಕುಟುಂಬಸ್ಥರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಅಪಘಾತದ ಪ್ರಕರಣದಲ್ಲಿ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು, ತಪ್ಪಿತಸ್ಥರಿಗೆ ಕಾನೂನಿನಡಿ ಕಠಿಣ ಶಿಕ್ಷೆಯಾಗಬೇಕು ಹಾಗೂ ಮೃತರ ಕುಟುಂಬಗಳಿಗೆ ನ್ಯಾಯ ದೊರಕಬೇಕು ಎಂಬ ಉದ್ದೇಶದಿಂದ ಮೂರು ಕುಟುಂಬಗಳು ಒಗ್ಗಟ್ಟಿನಿಂದ ಹೋರಾಟ ನಡೆಸುವ ಕುರಿತು ಚರ್ಚಿಸಲಾಯಿತು.
ಇದರ ಮುಂದುವರಿದ ಭಾಗವಾಗಿ ನಿಯೋಗವನ್ನು ರಚಿಸಿ, ಕೇರಳದ ಸಚಿವ ಟಿ. ಸಿದ್ದೀಕ್ ಅವರನ್ನು ಭೇಟಿ ಮಾಡಿ, ಪ್ರಕರಣದ ತನಿಖೆ, ಕಾನೂನು ಹೋರಾಟ ಹಾಗೂ ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸುವ ಕುರಿತು ಮಾತುಕತೆ ನಡೆಸಲಾಯಿತು.
ಮೂರು ಅಮೂಲ್ಯ ಯುವಜೀವಗಳನ್ನು ಬಲಿಪಡೆದ ಈ ದುರಂತದಲ್ಲಿ ಯಾವುದೇ ಪ್ರಭಾವ ಅಥವಾ ಒತ್ತಡಕ್ಕೆ ಮಣಿಯದೆ, ನ್ಯಾಯಯುತ ತನಿಖೆ ನಡೆಯಬೇಕು ಎಂಬುದು ಕುಟುಂಬಸ್ಥರ ಪ್ರಮುಖ ಆಗ್ರಹವಾಗಿದೆ.
ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದ ನಡುವೆಯೂ ನ್ಯಾಯಕ್ಕಾಗಿ ಮೂರು ಕುಟುಂಬಗಳು ಒಂದಾಗಿರುವುದು ಈ ಪ್ರಕರಣದ ಮುಂದಿನ ಕಾನೂನು ಹೋರಾಟಕ್ಕೆ ಮಹತ್ವದ ಬೆಳವಣಿಗೆಯಾಗಿದೆ.