Featured, ಸ್ಥಳೀಯ

ಸುಳ್ಯ ದಸರಾ ಶೋಭಾಯಾತ್ರೆ: ಸಮಯದ ಮಿತಿ ಹಾಗೂ ಹಿಂದಿನ ವರ್ಷದ ಅನಾನುಕೂಲಗಳಿಂದ ಈ ಬಾರಿ ಐದು ತಂಡಗಳ ಸ್ತಬ್ಧಚಿತ್ರ ಪ್ರದರ್ಶನ ಇಲ್ಲ.!

ಸುಳ್ಯ: ಅಕ್ಟೋಬರ್ 24ರಂದು ನಡೆಯಲಿರುವ ಸುಳ್ಯ ದಸರಾ ಶೋಭಾಯಾತ್ರೆಯಲ್ಲಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ನಿಗದಿಪಡಿಸಿರುವ ಸಮಯದ ಮಿತಿ ಹಾಗೂ ಕಳೆದ ವರ್ಷದ ಶೋಭಾಯಾತ್ರೆಯಲ್ಲಿ ಎದುರಾದ ಅನಾನುಕೂಲಗಳ ಹಿನ್ನೆಲೆಯಲ್ಲಿ ಈ ಬಾರಿ ಐದು ಪ್ರಮುಖ ತಂಡಗಳು ಸ್ತಬ್ಧಚಿತ್ರ ಪ್ರದರ್ಶನದಿಂದ ಹಿಂದೆ ಸರಿಯಲು ನಿರ್ಧರಿಸಿವೆ.

ಈ ಕುರಿತು ಗಜಕೇಸರಿ ನಡುಬೈಲು, ಡಿಜೆ ಫ್ರೆಂಡ್ಸ್ ಸುಳ್ಯ, ಕಾರ್ಗಿಲ್ ಬಾಯ್ಸ್ ಜಟ್ಟಿಪಳ್ಳ, ಜಟಾಯು ಫ್ರೆಂಡ್ಸ್ ಸುಳ್ಯ ಹಾಗೂ ಅಗಸ್ತ್ಯ ವಿಷ್ಣು ಸರ್ಕಲ್ ಸುಳ್ಯ ತಂಡಗಳ ಅಧ್ಯಕ್ಷರು ಮತ್ತು ಸದಸ್ಯರು ಜಂಟಿಯಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಸುಳ್ಯ ದಸರಾ ಶೋಭಾಯಾತ್ರೆಯಲ್ಲಿ ಸ್ತಬ್ಧಚಿತ್ರಗಳ ಪ್ರಾಯೋಜಕರಾಗಿ ಸಕ್ರಿಯವಾಗಿ ಪಾಲ್ಗೊಂಡು, ಶೋಭಾಯಾತ್ರೆಯ ಯಶಸ್ಸಿಗೆ ಸಹಕಾರ ನೀಡುತ್ತಾ ಬಂದಿದ್ದೇವೆ. ಆದರೆ ಕಳೆದ ವರ್ಷದ ಶೋಭಾಯಾತ್ರೆಯಲ್ಲಿ ಸ್ತಬ್ಧಚಿತ್ರ ಪ್ರದರ್ಶನದ ಸಂದರ್ಭದಲ್ಲಿ ಕೆಲವು ಅನಾನುಕೂಲಗಳು ಎದುರಾಗಿದ್ದವು. ಇದರೊಂದಿಗೆ ಪ್ರಸಕ್ತ ವರ್ಷದ ಶೋಭಾಯಾತ್ರೆಯಲ್ಲಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ರಾತ್ರಿ 7 ಗಂಟೆಯಿಂದ 10.30ರವರೆಗೆ ಮಾತ್ರ ಕಾಲಾವಕಾಶ ನಿಗದಿಪಡಿಸಲಾಗಿದೆ. ಈ ಸೀಮಿತ ಅವಧಿಯಲ್ಲಿ ನಮ್ಮ ತಂಡಗಳ ಸ್ತಬ್ಧಚಿತ್ರಗಳನ್ನು ಸಮರ್ಪಕವಾಗಿ ಪ್ರದರ್ಶಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಬಾರಿ ಪ್ರದರ್ಶನದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಷ್ಟು ವರ್ಷಗಳ ಕಾಲ ನಮ್ಮ ತಂಡಗಳ ಮೇಲೆ ವಿಶ್ವಾಸವಿಟ್ಟು ಪ್ರೋತ್ಸಾಹ ಹಾಗೂ ಸಹಕಾರ ನೀಡಿದ ಸುಳ್ಯದ ಜನತೆಗೆ ನಾವು ಸದಾ ಚಿರಋಣಿಗಳಾಗಿದ್ದೇವೆ. ಮುಂದಿನ ವರ್ಷ ಸೂಕ್ತ ಅವಕಾಶ ಮತ್ತು ಅನುಕೂಲಕರ ಪರಿಸ್ಥಿತಿ ದೊರೆತಲ್ಲಿ ಇನ್ನಷ್ಟು ಆಕರ್ಷಕ ಹಾಗೂ ಉತ್ತಮ ಸ್ತಬ್ಧಚಿತ್ರಗಳೊಂದಿಗೆ ದಸರಾ ಶೋಭಾಯಾತ್ರೆಗೆ ಮರಳುವ ಆಶಯ ಹೊಂದಿದ್ದೇವೆ ಎಂದು ತಂಡಗಳ ಪದಾಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿಯ ಶೋಭಾಯಾತ್ರೆಯಲ್ಲಿ ತಮ್ಮ ತಂಡಗಳ ಸ್ತಬ್ಧಚಿತ್ರ ಪ್ರದರ್ಶನ ಇರುವುದಿಲ್ಲ ಎಂಬುದನ್ನು ಸುಳ್ಯದ ಸಾರ್ವಜನಿಕರು ಗಮನಿಸುವಂತೆ ಐದು ತಂಡಗಳ ಅಧ್ಯಕ್ಷರು ಹಾಗೂ ಸದಸ್ಯರು ಜಂಟಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.