ಅಧ್ಯಕ್ಷರಾಗಿ ಸಿದ್ದಿಕ್ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ತಾಜುದ್ದೀನ್ ಆಯ್ಕೆ
ಮಂಗಳೂರು, ಅ.17: ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ಸ್ ಕೌನ್ಸಿಲ್ (AILC) ಕರ್ನಾಟಕ ಇದರ ಕರಾವಳಿ ಜಿಲ್ಲೆಗಳ ವಕೀಲರ ವೇದಿಕೆಯ ಸಭೆಯು ಮಂಗಳೂರಿನ ಲಾಲ್ಬಾಗ್ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕವನ್ನು ರಚಿಸಿ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯಾಧ್ಯಕ್ಷ, ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ಅಡ್ವೊಕೇಟ್ ಬಾಲನ್ ಅವರ ನಿರ್ದೇಶನದಂತೆ ನಡೆದ ಸಭೆಯ ಅಧ್ಯಕ್ಷತೆಯನ್ನು ಸಂಘಟನೆಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ, ಹೈಕೋರ್ಟ್ ನ್ಯಾಯವಾದಿ ಅಡ್ವೊಕೇಟ್ ಅಬ್ದುಲ್ ಮಜೀದ್ ಖಾನ್ ವಹಿಸಿದ್ದರು.
ನೂತನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅಡ್ವೊಕೇಟ್ ಸಿದ್ದಿಕ್ ಹಾಜಿ (ಪುತ್ತೂರು), ಉಪಾಧ್ಯಕ್ಷರಾಗಿ ಅಡ್ವೊಕೇಟ್ ಜೀಶಾನ್ ಅಲಿ (ಮಂಗಳೂರು) ಹಾಗೂ ಅಡ್ವೊಕೇಟ್ ಗ್ರೆಗೋರಿ ಡಿಸೋಜ (ಪುತ್ತೂರು), ಪ್ರಧಾನ ಕಾರ್ಯದರ್ಶಿಯಾಗಿ ಅಡ್ವೊಕೇಟ್ ತಾಜುದ್ದೀನ್ (ಮಂಗಳೂರು), ಕಾರ್ಯದರ್ಶಿಯಾಗಿ ಅಡ್ವೊಕೇಟ್ ರಶೀದ್ (ಸುಳ್ಯ) ಹಾಗೂ ಖಜಾಂಚಿಯಾಗಿ ಅಡ್ವೊಕೇಟ್ ಇಜ್ಹಾಜ್ (ಬಂಟ್ವಾಳ) ಆಯ್ಕೆಯಾದರು.
ಸಭೆಯಲ್ಲಿ ವಕೀಲರ ಹಕ್ಕುಗಳ ರಕ್ಷಣೆ, ವೃತ್ತಿಪರ ಸಮಸ್ಯೆಗಳು, ನ್ಯಾಯಾಂಗ ಕ್ಷೇತ್ರದಲ್ಲಿ ವಕೀಲರು ಎದುರಿಸುತ್ತಿರುವ ಸವಾಲುಗಳು ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ಕರಾವಳಿ ಭಾಗದ ವಕೀಲರನ್ನು ಸಂಘಟಿತ ವೇದಿಕೆಯಡಿ ಒಗ್ಗೂಡಿಸುವುದು, ಅವರ ವೃತ್ತಿಪರ ಹಿತಾಸಕ್ತಿಗಳನ್ನು ಕಾಪಾಡುವುದು, ವಕೀಲರ ಸಮಸ್ಯೆಗಳಿಗೆ ಸಂಘಟನಾತ್ಮಕವಾಗಿ ಸ್ಪಂದಿಸುವುದು ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಪಾತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಘಟಕವನ್ನು ರಚಿಸಲಾಗಿದೆ ಎಂದು ಸಂಘಟಕರು ತಿಳಿಸಿದರು. ಸಭೆಯಲ್ಲಿ ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಅಡ್ವೊಕೇಟ್ ಸಾಹಿರಾ ಕೆ. ಜುಬೈರ್ (ಬೆಂಗಳೂರು) ಹಾಗೂ ಅಡ್ವೊಕೇಟ್ ಅಶ್ರಫ್ ಕೆ. (ಪುತ್ತೂರು) ಉಪಸ್ಥಿತರಿದ್ದರು.