ಜುಬೈಲ್ (ಸೌದಿ ಅರೇಬಿಯಾ): ಪುತ್ತೂರಿನ ದಾರುಲ್ ಹಸನಿಯಾ ಅಕಾಡೆಮಿ ಎಜು-ಪಾರ್ಕ್ನ ಸೌದಿ ಅರೇಬಿಯಾ ಜುಬೈಲ್ ಘಟಕ ಹಾಗೂ ಎಸ್.ಐ.ಸಿ. ಜುಬೈಲ್ ಘಟಕದ ಜಂಟಿ ಆಶ್ರಯದಲ್ಲಿ ದಾರುಲ್ ಹಸನಿಯಾ ಸಂಸ್ಥೆಯ ನೂತನ ಅಧ್ಯಕ್ಷ ಸಯ್ಯಿದ್ ಅಲಿ ತಂಙಳ್ ಕುಂಬೋಳ್, ಸಮಸ್ತ ಕೇಂದ್ರ ಮುಶಾವರ ಸದಸ್ಯ ಖಾಝಿ ಉಸ್ಮಾನುಲ್ ಫೈಝಿ ತೋಡಾರ್ ಹಾಗೂ ಮುಫತ್ತಿಷ್ ಉಮರ್ ದಾರಿಮಿ ಅವರಿಗೆ ಅಭಿನಂದನಾ ಸಮಾರಂಭವು ಜುಬೈಲ್ನ ಕೋಸ್ಟಲ್ ಡೈನ್ ರೆಸ್ಟೋರೆಂಟ್ನಲ್ಲಿ ನಡೆಯಿತು.
ಸಮಾರಂಭದಲ್ಲಿ ಮೂವರು ಗಣ್ಯರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಯ್ಯಿದ್ ಅಲಿ ತಂಙಳ್ ಕುಂಬೋಳ್, ದಾರುಲ್ ಹಸನಿಯಾ ವಿದ್ಯಾಸಂಸ್ಥೆಯು ಎಸ್.ಎನ್.ಇ.ಸಿ. ಪಠ್ಯಕ್ರಮವನ್ನು ಅಳವಡಿಸಿಕೊಂಡು ಅಲ್ಪಾವಧಿಯಲ್ಲಿಯೇ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಯತ್ತ ಮುನ್ನಡೆಯುತ್ತಿರುವುದು ಶ್ಲಾಘನೀಯವಾಗಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಬೆಳೆಸುವ ಸಂಸ್ಥೆಯ ಪ್ರಯತ್ನಕ್ಕೆ ಸಮಾಜದ ಸರ್ವರ ಸಹಕಾರ ಅಗತ್ಯವಾಗಿದೆ. ಸಂಸ್ಥೆಯ ಶೈಕ್ಷಣಿಕ ಹಾಗೂ ಸಾಂಸ್ಥಿಕ ಬೆಳವಣಿಗೆಯಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಪ್ರಾರ್ಥನೆಗೆ ನೇತೃತ್ವ ನೀಡಿ ಮಾತನಾಡಿದ ಸಮಸ್ತ ಕೇಂದ್ರ ಮುಶಾವರ ಸದಸ್ಯ ಖಾಝಿ ಉಸ್ಮಾನುಲ್ ಫೈಝಿ ತೋಡಾರ್, ಶಿಕ್ಷಣ ಕ್ಷೇತ್ರಕ್ಕೆ ನೀಡುವ ನೆರವು ಭವಿಷ್ಯದ ಪೀಳಿಗೆಗೆ ಬೆಳಕು ನೀಡಿದಂತೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಮಾಜದ ಎಲ್ಲ ವರ್ಗದವರ ಸಹಕಾರ ಅತ್ಯಗತ್ಯವಾಗಿದೆ. ಶಿಕ್ಷಣ ಸಂಸ್ಥೆಗಳನ್ನು ಬೆಂಬಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್.ಐ.ಸಿ. ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಮುಖಂಡ ಸುಲೈಮಾನ್ ಖಾಸಿಮಿ, ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ಸಮನ್ವಯದೊಂದಿಗೆ ಮೌಲ್ಯಾಧಾರಿತ ಸಮಾಜ ನಿರ್ಮಾಣದ ಗುರಿಯನ್ನು ಹೊಂದಿರುವ ದಾರುಲ್ ಹಸನಿಯಾ ಅಕಾಡೆಮಿಯ ಕಾರ್ಯವೈಖರಿ ಪ್ರಶಂಸನೀಯವಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ದಾರುಲ್ ಹಸನಿಯಾ ಗಲ್ಫ್ ಸಮಿತಿಯ ನಿರ್ದೇಶಕ ಹಾಗೂ ಉದ್ಯಮಿ ಫಾರೂಕ್ ಹಾಜಿ ಪೋರ್ಟ್ವೆ, ದಾರುಲ್ ಹಸನಿಯಾ ಅಕಾಡೆಮಿಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದರೊಂದಿಗೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.
ಸಂಸ್ಥೆಯ ನೂತನ ಅಧ್ಯಕ್ಷ ಸಯ್ಯಿದ್ ಅಲಿ ತಂಙಳ್ ಕುಂಬೋಳ್ ಅವರ ಸಮರ್ಥ ನೇತೃತ್ವದಲ್ಲಿ ದಾರುಲ್ ಹಸನಿಯಾ ಅಕಾಡೆಮಿಯು ಶೈಕ್ಷಣಿಕ ಹಾಗೂ ಸಾಂಸ್ಥಿಕವಾಗಿ ಮತ್ತಷ್ಟು ಪ್ರಗತಿ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಯಶಸ್ಸಿಗೆ ಸಹಕರಿಸಿದ ಸಮಸ್ತ ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಫೈಝಿ ತೋಡಾರ್ ಸೇರಿದಂತೆ ಸಂಸ್ಥೆಯ ಅಭಿವೃದ್ಧಿಗೆ ನಿರಂತರವಾಗಿ ಸಹಕಾರ ನೀಡುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ದಾರುಲ್ ಹಸನಿಯಾ ಗಲ್ಫ್ ಪ್ರತಿನಿಧಿ ಅಬ್ದುಲ್ ಕರೀಂ ದಾರಿಮಿ ಹಾಗೂ ಮುಫತ್ತಿಷ್ ಉಮರ್ ದಾರಿಮಿ ಮಾತನಾಡಿ, ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳು, ಸಾಧನೆಗಳು ಹಾಗೂ ಭವಿಷ್ಯದ ಅಭಿವೃದ್ಧಿ ಯೋಜನೆಗಳ ಕುರಿತು ವಿವರಿಸಿದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ದಾರುಲ್ ಹಸನಿಯಾ ಅಕಾಡೆಮಿಯ ಕೋಶಾಧಿಕಾರಿ ಆಸಿಫ್ ಹಾಜಿ ದರ್ಬೆ, ದಾರುಲ್ ಹಸನಿಯಾ ಸೌದಿ ಅರೇಬಿಯಾ ಸಮಿತಿಯ ಅಧ್ಯಕ್ಷ ಫೈರೋಝ್ ಹಾಜಿ ಪರ್ಲಡ್ಕ, ಪ್ರಧಾನ ಕಾರ್ಯದರ್ಶಿ ನಿಸಾರ್ ಪರ್ಲಡ್ಕ, ಉಪಾಧ್ಯಕ್ಷ ತೌಸೀರ್ ದರ್ಬೆ, ಎಸ್.ಐ.ಸಿ. ಜುಬೈಲ್ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಾಕ್ ಫೈಝಿ, ಇಸ್ಮಾಯಿಲ್ ಹುದವಿ, ಉಸ್ಮಾನ್ ಶಾಫಿ, ಇಬ್ರಾಹಿಂ ದಾರಿಮಿ, ಅಬ್ದುಲ್ ಮಜೀದ್ ಕರ್ನಿರೆ, ತಾಹಿರ್ ಸಾಲ್ಮರ, ಅಬ್ದುಲ್ ಲತೀಫ್ ಮರಕ್ಕಿಣಿ, ಸುಹೈಲ್ ಕೋಡಿಂಬಾಡಿ, ಇಕ್ಬಾಲ್ ಕುಂತೂರು, ಆಸಿಫ್ ಬಪ್ಪಳಿಗೆ, ಅಬ್ದುಲ್ ರಹಿಮಾನ್ ಕೆ.ಎಸ್.ಕೆ., ಜಸೀಂ, ಶಫೀಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಎಸ್.ಐ.ಸಿ. ಜುಬೈಲ್ ಸಮಿತಿಯ ಮುಖಂಡ ಸಯ್ಯಿದ್ ಅಹ್ಮದ್ ತಂಙಳ್ ಸ್ವಾಗತಿಸಿದರು. ಆಶಿಕ್ ಬಾಖವಿ ಕಿರಾಅತ್ ಪಠಿಸಿದರು. ಸಲಾಹುದ್ದೀನ್ ಜೋಕಟ್ಟೆ ವಂದಿಸಿದರು. ನವಾಝ್ ಮುಕ್ವೆ ಕಾರ್ಯಕ್ರಮ ನಿರೂಪಿಸಿದರು.