Featured, ಇತರೆ

ಎನ್‌ಎಂಸಿ ಸುವರ್ಣ ಮಹೋತ್ಸವ: ಕುರುಂಜಿಬಾಗ್ ರಸ್ತೆ, ಕೆವಿಜಿ ವೃತ್ತಕ್ಕೆ ಆಧುನಿಕ ಸ್ಪರ್ಶ ನೀಡಲು ಕೆ.ಎಂ. ಮುಸ್ತಫ ಮನವಿ

ರಸ್ತೆ ಅಗಲೀಕರಣ, ಫುಟ್‌ಪಾತ್, ಕೇಬಲ್ ಡಕ್ಟ್, ಆಧುನಿಕ ದಾರಿದೀಪ ಹಾಗೂ ಹಸಿರೀಕರಣಕ್ಕೆ ಒತ್ತು 

ಸುಳ್ಯ: ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದ (ಎನ್‌ಎಂಸಿ) ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ನಗರಕ್ಕೆ ಗಣ್ಯಾತಿಗಣ್ಯರ ಆಗಮನ ನಿರೀಕ್ಷೆಯಿರುವುದರಿಂದ ಕುರುಂಜಿಬಾಗ್ ರಸ್ತೆ ಹಾಗೂ ಕೆವಿಜಿ ವೃತ್ತವನ್ನು ಅಭಿವೃದ್ಧಿಪಡಿಸಿ ಆಧುನಿಕ ಮತ್ತು ಡಿಜಿಟಲ್ ಸ್ಪರ್ಶ ನೀಡುವಂತೆ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ ಅವರು ಕೆವಿಜಿ ಶಿಕ್ಷಣ ಸಂಸ್ಥೆಗಳಿಗೆ ಮನವಿ ಸಲ್ಲಿಸಿದ್ದಾರೆ.

ಆಧುನಿಕ ಸುಳ್ಯದ ಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರು ಸುಳ್ಯವನ್ನು ವಿಶ್ವದ ಭೂಪಟದಲ್ಲಿ ಗುರುತಿಸುವಂತೆ ಮಾಡಿ, ಶಿಕ್ಷಣ ಕಾಶಿಯನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಕನಸಿಗೆ ಮುನ್ನುಡಿ ಬರೆದದ್ದು ಸುಳ್ಯದ ಪ್ರಥಮ ಕಾಲೇಜಾದ ನೆಹರೂ ಸ್ಮಾರಕ ಮಹಾವಿದ್ಯಾಲಯವನ್ನು ಸ್ಥಾಪಿಸುವ ಮೂಲಕ. ಈ ಶಿಕ್ಷಣ ಸಂಸ್ಥೆಯು ಪ್ರಸಕ್ತ ವರ್ಷದ ಡಿಸೆಂಬರ್ ತಿಂಗಳಲ್ಲಿ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಸುಳ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದು ಮುಸ್ತಫ ತಿಳಿಸಿದ್ದಾರೆ.

ಸುವರ್ಣ ಮಹೋತ್ಸವ ಸಮಾರಂಭಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಚಿವರು, ರಾಜ್ಯಪಾಲರು ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಸುಳ್ಯ ನಗರದ ಸೌಂದರ್ಯವನ್ನು ಹೆಚ್ಚಿಸುವುದರೊಂದಿಗೆ ಪ್ರಮುಖ ರಸ್ತೆಗಳಿಗೆ ಆಧುನಿಕ ಸ್ಪರ್ಶ ನೀಡಿ, ನಗರದ ಮೆರುಗನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕುರುಂಜಿಬಾಗ್ ರಸ್ತೆ ಹಾಗೂ ಕೆವಿಜಿ ವೃತ್ತದ ಸಮಗ್ರ ಅಭಿವೃದ್ಧಿಗೆ ಮನವಿ

ಕೆವಿಜಿ ಕ್ಯಾಂಪಸ್ ಸಮೀಪದ ಕುರುಂಜಿಬಾಗ್ ರಸ್ತೆಯ ಅಗಲೀಕರಣ, ಸುಸಜ್ಜಿತ ಫುಟ್‌ಪಾತ್ ನಿರ್ಮಾಣ, ಇಂಟರ್‌ಲಾಕ್ ಪೇವರ್ ಬ್ಲಾಕ್ ಅಳವಡಿಕೆ, ಆಧುನಿಕ ವಿನ್ಯಾಸದ ದಾರಿದೀಪಗಳು, ಸುಸಜ್ಜಿತ ಸೂಚನಾ ಫಲಕಗಳ ಅಳವಡಿಕೆ ಹಾಗೂ ರಸ್ತೆ ಬದಿಗಳಲ್ಲಿ ಹಸಿರೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಅಲ್ಲದೆ, ವಿದ್ಯುತ್ ಹಾಗೂ ದೂರಸಂಪರ್ಕ ಕೇಬಲ್‌ಗಳ ಅಳವಡಿಕೆ ಮತ್ತು ನಿರ್ವಹಣೆಗಾಗಿ ಪದೇಪದೇ ರಸ್ತೆ ಅಗೆಯುವುದನ್ನು ತಪ್ಪಿಸುವ ಉದ್ದೇಶದಿಂದ ವ್ಯವಸ್ಥಿತ ಕೇಬಲ್ ಡಕ್ಟ್ ನಿರ್ಮಾಣಕ್ಕೂ ಆದ್ಯತೆ ನೀಡುವಂತೆ ಕೋರಲಾಗಿದೆ. ಈ ಎಲ್ಲ ಕಾಮಗಾರಿಗಳನ್ನು ಕೆವಿಜಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಕೈಗೆತ್ತಿಕೊಂಡು ಕುರುಂಜಿಬಾಗ್ ರಸ್ತೆ ಮತ್ತು ಕೆವಿಜಿ ವೃತ್ತಕ್ಕೆ ಆಧುನಿಕ ಸ್ವರೂಪ ನೀಡುವಂತೆ ಮನವಿ ಸಲ್ಲಿಸಲಾಗಿದೆ.

ಕೆವಿಜಿ ಸಂಸ್ಥೆಯಿಂದ ಸಕಾರಾತ್ಮಕ ಸ್ಪಂದನೆ

ತಮ್ಮ ಮನವಿಗೆ ಕೆವಿಜಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದು ಕೆ.ಎಂ. ಮುಸ್ತಫ ತಿಳಿಸಿದ್ದಾರೆ.

ಈ ಸಂಬಂಧ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಪ್ರಧಾನ ಕಾರ್ಯದರ್ಶಿ, ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ. ಹಾಗೂ ಎಂಜಿನಿಯರ್‌ಗಳೊಂದಿಗೆ ಈಗಾಗಲೇ ಒಂದು ಸುತ್ತಿನ ಸಮಾಲೋಚನೆ ನಡೆಸಿ, ಪ್ರಸ್ತಾವಿತ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಲಾಗಿದೆ.

ಮುಂದಿನ ದಿನಗಳಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಅಗತ್ಯ ಸಹಕಾರ ನೀಡುವುದಾಗಿ ಸಂಸ್ಥೆಯ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ ಎಂದು ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ ತಿಳಿಸಿದ್ದಾರೆ.