ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಆಗ್ರಹ; ಕೇಂದ್ರ ಸರ್ಕಾರದ ವಿರುದ್ಧ ನಾಯಕರ ತೀವ್ರ ವಾಗ್ದಾಳಿ — ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಕೆ
ಸುಳ್ಯ: ದೇಶಾದ್ಯಂತ ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆಯುತ್ತಿರುವುದಾಗಿ ಆರೋಪಿಸಲಾದ ಅಕ್ರಮಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಆಗ್ರಹಿಸಿ ಎಸ್ಕೆಎಸ್ಎಸ್ಎಫ್ ವತಿಯಿಂದ ಜಿಲ್ಲಾದ್ಯಂತ ಏಕಕಾಲದಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯ ಅಂಗವಾಗಿ ನವೆಂಬರ್ 13ರಂದು ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು. ಎಸ್ಕೆಎಸ್ಎಸ್ಎಫ್ ಸುಳ್ಯ ವಲಯ ಅಧ್ಯಕ್ಷ ಅಕ್ಬರ್ ಕರಾವಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರು, ವಿವಿಧ ಸಾಮಾಜಿಕ ಹಾಗೂ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿ ಎಸ್ಐಆರ್ ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮತದಾನದ ಹಕ್ಕು ಕಸಿದುಕೊಳ್ಳುವ ಪ್ರಯತ್ನ ಖಂಡನೀಯ: ಟಿ.ಎಂ. ಶಹೀದ್ ತೆಕ್ಕಿಲ್
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್, ಪ್ರಜಾಪ್ರಭುತ್ವದ ಮೂಲಾಧಾರವಾಗಿರುವ ಮತದಾನದ ಹಕ್ಕು ಪ್ರತಿಯೊಬ್ಬ ಅರ್ಹ ನಾಗರಿಕನ ಅಮೂಲ್ಯ ಸಾಂವಿಧಾನಿಕ ಹಕ್ಕಾಗಿದೆ. ಆದರೆ, ಎಸ್ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಜನಸಾಮಾನ್ಯರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ವಿವಿಧ ನೀತಿಗಳು ಹಾಗೂ ಆಡಳಿತಾತ್ಮಕ ಕ್ರಮಗಳ ಮೂಲಕ ಅಲ್ಪಸಂಖ್ಯಾತ ಸಮುದಾಯಗಳನ್ನು ವ್ಯವಸ್ಥಿತವಾಗಿ ದಮನಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಜನರ ಹಕ್ಕುಗಳನ್ನು ರಕ್ಷಿಸಬೇಕಾದ ಸರ್ಕಾರವೇ ಅವುಗಳನ್ನು ದುರ್ಬಲಗೊಳಿಸುವ ಧೋರಣೆ ಅನುಸರಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ಕಟುವಾಗಿ ಟೀಕಿಸಿದರು.
ಮತದಾನದ ಹಕ್ಕು ಯಾರ ಕೃಪೆಯಿಂದ ದೊರೆತ ಭಿಕ್ಷೆಯಲ್ಲ: ಯಾಸಿರ್ ಅರಫಾತ್ ಕೌಸರಿ
ಪ್ರತಿಭಟನೆಯ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಎಸ್ಕೆಎಸ್ಎಸ್ಎಫ್ ದಕ್ಷಿಣ ಕನ್ನಡ ಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಸಿರ್ ಅರಫಾತ್ ಕೌಸರಿ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ಕೈಬಿಡುವ ಮೂಲಕ ಪ್ರಜಾಪ್ರಭುತ್ವದ ಮೂಲಭೂತ ಆಶಯಗಳಿಗೆ ಧಕ್ಕೆ ತರಲಾಗುತ್ತಿದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ ಕೇಂದ್ರ ಸರ್ಕಾರವೇ ಪ್ರಜಾಪ್ರಭುತ್ವದ ತಳಹದಿಯನ್ನು ದುರ್ಬಲಗೊಳಿಸುವ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮತದಾನದ ಹಕ್ಕು ಯಾರೊಬ್ಬರ ಕೃಪೆಯಿಂದ ದೊರೆತ ಭಿಕ್ಷೆಯಲ್ಲ; ಅದು ಪ್ರಜಾಪ್ರಭುತ್ವದ ಜೀವನಾಡಿ. ಸಂವಿಧಾನವು ಪ್ರತಿಯೊಬ್ಬ ಅರ್ಹ ನಾಗರಿಕನಿಗೆ ಒದಗಿಸಿರುವ ಅಮೂಲ್ಯ ಹಕ್ಕು. ಈ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸುವುದು ಪ್ರಜಾಪ್ರಭುತ್ವದ ಆತ್ಮದ ಮೇಲಿನ ಪ್ರಹಾರವಾಗಿದೆ. ಜನರ ಮತದಾನದ ಹಕ್ಕಿನ ಮೇಲೆ ನಡೆಯುವ ಯಾವುದೇ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ” ಎಂದು ಗುಡುಗಿದರು. “ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದರೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಶಾಶ್ವತವಾಗಿರಬೇಕು. ಅಧಿಕಾರದ ಬಲದಿಂದ ಜನರ ಹಕ್ಕುಗಳನ್ನು ಕಸಿದುಕೊಳ್ಳಬಹುದು ಎಂಬ ಭ್ರಮೆಯಲ್ಲಿ ಯಾರೂ ಇರಬಾರದು. ಜನರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಕೊನೆಯ ಉಸಿರಿರುವವರೆಗೂ ಹೋರಾಟ ನಡೆಸಲು ನಾವು ಸಿದ್ಧರಿದ್ದೇವೆ” ಎಂದು ಎಚ್ಚರಿಸಿದರು.
ತಟ್ಟೆಯ ಸದ್ದು ಕೇಳುವ ಸರ್ಕಾರಕ್ಕೆ ಜನರ ನೋವಿನ ಕೂಗು ಕೇಳುವುದಿಲ್ಲವೇ?: ಶಶಿಧರ ಎಂ.ಜೆ. ವ್ಯಂಗ್ಯ
ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಶಶಿಧರ ಎಂ.ಜೆ., ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆಗಳನ್ನು ತೀವ್ರವಾಗಿ ಖಂಡಿಸಿ ವಾಗ್ದಾಳಿ ನಡೆಸಿದರು. ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ತಟ್ಟೆ ಬಾರಿಸಲು ಕರೆ ನೀಡಿದ ಸರ್ಕಾರಕ್ಕೆ, ಇಂದು ದೇಶದ ಜನಸಾಮಾನ್ಯರು, ವಿದ್ಯಾರ್ಥಿಗಳು ಹಾಗೂ ಅನ್ಯಾಯದ ವಿರುದ್ಧ ಧ್ವನಿಯೆತ್ತುತ್ತಿರುವವರ ಆಕ್ರೋಶದ ಕೂಗು ಕೇಳಿಸದಿರುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಅಂಟಿದ ಕಪ್ಪುಚುಕ್ಕೆಯಾಗಿದೆ. ತಟ್ಟೆಯ ಸದ್ದು ಕೇಳುವ ಸರ್ಕಾರಕ್ಕೆ ಜನರ ನೋವಿನ ಕೂಗು ಕೇಳಿಸದಿರುವುದು ವಿಪರ್ಯಾಸವಲ್ಲದೆ ಮತ್ತೇನು? ಸರ್ಕಾರದ ಕಿವಿಗಳು ತಟ್ಟೆಯ ಸದ್ದಿಗೆ ಮಾತ್ರ ತೆರೆದುಕೊಳ್ಳುತ್ತವೆಯೇ?” ಎಂದು ವ್ಯಂಗ್ಯವಾಡಿದರು. ಅನ್ಯಾಯ, ಅಕ್ರಮ ಹಾಗೂ ದಬ್ಬಾಳಿಕೆಯ ವಿರುದ್ಧ ನಡೆಯುವ ನ್ಯಾಯಯುತ ಹೋರಾಟಗಳನ್ನು ದಮನಿಸುವ ಮೂಲಕ ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವದ ಮೂಲ ಆಶಯಗಳನ್ನೇ ಬುಡಮೇಲು ಮಾಡುತ್ತಿದೆ. ಜನರ ಧ್ವನಿಯನ್ನು ಆಲಿಸಬೇಕಾದ ಸರ್ಕಾರವೇ ಆ ಧ್ವನಿಯನ್ನು ಅಡಗಿಸಲು ಮುಂದಾಗಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯ ಧ್ವನಿಯನ್ನು ಅಡಗಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ: ಅಬೂಬಕ್ಕರ್ ಪೂಪಿ
ನಂತರ ಮಾತನಾಡಿದ ಎಸ್ಕೆಎಸ್ಎಸ್ಎಫ್ ಮುಖಂಡ ಅಬೂಬಕ್ಕರ್ ಪೂಪಿ ಅವರು ನೀತಿಕಥೆಗಳ ಉದಾಹರಣೆಗಳನ್ನು ಪ್ರಸ್ತಾಪಿಸುತ್ತಾ, ಜನರ ಧ್ವನಿಗೆ ಕಿವಿಗೊಡಬೇಕಾದ ಸರ್ಕಾರವೇ ಪ್ರತಿಭಟನೆಯ ಧ್ವನಿಯನ್ನು ಅಡಗಿಸಲು ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಹೇಳಿದರು.ಇಂತಹ ಧೋರಣೆಗಳು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೆಂದು ಹೆಮ್ಮೆಪಡುವ ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಎಸ್ಐಆರ್ ವಿರುದ್ಧ ಮುಖಂಡರ ಆಕ್ರೋಶ
ಪ್ರತಿಭಟನೆಯಲ್ಲಿ ಎಸ್ಕೆಎಸ್ಎಸ್ಎಫ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಅಬ್ದುಲ್ಲಾ ಫೈಝಿ ಪೈಂಬೆಚಾಲು, ಸುಳ್ಯ ವಲಯ ಕೋಶಾಧಿಕಾರಿ ಯು.ಪಿ. ಬಶೀರ್ ಬೆಳ್ಳಾರೆ ಹಾಗೂ ಮುಖಂಡ ಶಾಫಿ ದಾರಿಮಿ ಮೊದಲಾದವರು ಮಾತನಾಡಿ, ಎಸ್ಐಆರ್ ಪ್ರಕ್ರಿಯೆಯಲ್ಲಿ ನಡೆಯುತ್ತಿರುವುದಾಗಿ ಆರೋಪಿಸಲಾದ ಅಕ್ರಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸಭೆಯಲ್ಲಿ ಸಮಸ್ತ ಸಂಯುಕ್ತ ಜಮಾಅತ್ ಕೋಶಾಧಿಕಾರಿ ಹಾಜಿ ಎಸ್.ಎ. ಹಮೀದ್, ತಾಜ್ ಮುಹಮ್ಮದ್ ಸಂಪಾಜೆ, ಆಲಿ ಹಾಜಿ ಕಲ್ಲುಗುಂಡಿ, ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯರಾದ ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೋ, ಹಸೈನಾರ್ ಫೈಝಿ, ಜಿ.ಕೆ. ಹಮೀದ್ ಗೂನಡ್ಕ, ಎಸ್.ಕೆ. ಹನೀಫ, ಇರ್ಷಾದ್ ಬದ್ರಿಯಾ, ಅಡ್ವೊಕೇಟ್ ಮೂಸಾ ಪೈಂಬೆಚಾಲು, ಅಬ್ದುಲ್ ಕಾದರ್ ಫೈಝಿ, ಜಮಾಲ್ ಬೆಳ್ಳಾರೆ, ಎ.ಬಿ. ಕಳಂಜ, ಆಸಿಫ್ ಅಝ್ಹರಿ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.ಎಸ್ಕೆಎಸ್ಎಸ್ಎಫ್ ಸುಳ್ಯ ವಲಯದ ವಿವಿಧ ಕ್ಲಸ್ಟರ್ಗಳ ಪದಾಧಿಕಾರಿಗಳು, ಸದಸ್ಯರು, ವಿಖಾಯ ತಂಡದ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಸ್ಕೆಎಸ್ಎಸ್ಎಫ್ ಸುಳ್ಯ ವಲಯ ಚೇರ್ಮನ್ ಇಕ್ಬಾಲ್ ಸುಣ್ಣಮೂಲೆ ಸ್ವಾಗತಿಸಿದರು. ಮುಹಿಯುದ್ದೀನ್ ಫೈಝಿ ಕಾರ್ಯಕ್ರಮ ನಿರೂಪಿಸಿದರು. ಖಾದರ್ ಮೊಟ್ಟೆಂಗಾರ್ ವಂದಿಸಿದರು.
ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ
ಪ್ರತಿಭಟನಾ ಸಭೆಯ ಬಳಿಕ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಸುಳ್ಯ ತಹಸೀಲ್ದಾರ್ ಕಚೇರಿಗೆ ತೆರಳಿ, ಎಸ್ಐಆರ್ ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.