Featured, ಇತರೆ

ಗೃಹಲಕ್ಷ್ಮಿ ಹಣ ನೀಡದ ಅಜ್ಜಿಯನ್ನೇ ಕೊಂದ ಮೊಮ್ಮಗ!

₹2,300 ಕಿತ್ತುಕೊಂಡು ಶವವನ್ನು ಘಟಪ್ರಭಾ ನದಿಗೆ ಎಸೆದ ಪಾತಕಿ 

ಬೆಳಗಾವಿ, ನ.19: ಗೃಹಲಕ್ಷ್ಮಿ ಯೋಜನೆಯಡಿ ಬರುತ್ತಿದ್ದ ಹಣವನ್ನು ನೀಡಲು ನಿರಾಕರಿಸಿದ 78 ವರ್ಷದ ಅಜ್ಜಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆಗೈದ ಮೊಮ್ಮಗ, ಆಕೆಯ ಬಳಿಯಿದ್ದ ₹2,300 ಹಣವನ್ನೂ ದೋಚಿ ಶವವನ್ನು ನದಿಗೆ ಎಸೆದಿರುವ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಹಮ್ಮವ್ವಾ ಸನದಿ (78) ಕೊಲೆಯಾದ ದುರ್ದೈವಿ. ಆಕೆಯ ಮೊಮ್ಮಗ ಭೀಮಪ್ಪ ರಾಮಪ್ಪ ಸನದಿ ಕೊಲೆ ಆರೋಪಿಯಾಗಿದ್ದಾನೆ.

ನವೆಂಬರ್ 10ರಂದು ಭೀಮಪ್ಪ ತನ್ನ ಅಜ್ಜಿಯನ್ನು ಸಂತೆಗೆ ಹೋಗುವ ನೆಪದಲ್ಲಿ ದ್ವಿಚಕ್ರ ವಾಹನದಲ್ಲಿ ಕರೆದೊಯ್ದಿದ್ದನು. ಅರಳಿಕಟ್ಟಿ ಗ್ರಾಮದ ಹೊರವಲಯದಲ್ಲಿರುವ ಗವಿಸಿದ್ದೇಶ್ವರ ಗುಡ್ಡದ ನಿರ್ಜನ ಪ್ರದೇಶಕ್ಕೆ ತಲುಪಿದ ಬಳಿಕ ಗೃಹಲಕ್ಷ್ಮಿ ಯೋಜನೆಯಿಂದ ಬರುತ್ತಿದ್ದ ಹಣವನ್ನು ತನಗೆ ನೀಡುವಂತೆ ಒತ್ತಾಯಿಸಿದ್ದಾನೆ. ಆದರೆ ಅಜ್ಜಿ ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೋಪಗೊಂಡ ಭೀಮಪ್ಪ, ಆಕೆಯ ಕೂದಲು ಹಿಡಿದು ಎಳೆದು ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಕೊಲೆ ಬಳಿಕ ಅಜ್ಜಿಯ ಬಳಿಯಿದ್ದ ₹2,300 ಹಣವನ್ನು ಕಿತ್ತುಕೊಂಡಿದ್ದಾನೆ. ನಂತರ ಶವವನ್ನು ಗೋಣಿಚೀಲದಲ್ಲಿ ತುಂಬಿ ಜಿನರಾಳ ಸಮೀಪದ ಘಟಪ್ರಭಾ ನದಿ ಡ್ಯಾಂ ಹಿನ್ನೀರಿಗೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಪ್ರಕರಣದ ಬೆನ್ನತ್ತಿದಾಗ ಮೊಮ್ಮಗನೇ ಅಜ್ಜಿಯನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಭೀಮಪ್ಪ ಸನದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಕುರಿತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ.

Related Posts