ಸುಳ್ಯ : ವಿಷ್ಣು ಸರ್ಕಲ್ ಪರಿಸರದಲ್ಲಿ ನೀರಿನ ಬವಣೆ : ನಾಲ್ಕು ವರ್ಷಗಳಿಂದ ಇಲ್ಲ..?! ಶುದ್ಧ ನಳ್ಳಿ ನೀರಿನ ಸರಬರಾಜು.??
ಸುಳ್ಯ ವಿಷ್ಣು ಸರ್ಕಲ್ ಪ್ರದೇಶದಲ್ಲಿ ನಾಲ್ಕು ವರ್ಷಗಳಿಂದ ಶುದ್ಧ ನಳ್ಳಿ ನೀರಿನ ಸರಬರಾಜು ಸ್ಥಗಿತಗೊಂಡಿದ್ದು, ಜನರು ನಿರಂತರ ಬಳಕೆಗೆ ಯೋಗ್ಯವಲ್ಲದ ಕೊಳವೆ ನೀರಿನ ಅವಲಂಬಿತ ಜೀವನ ನಡೆಸುತ್ತಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೊರೆದು ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವುದು ಸಾರ್ವಜನಿಕ ಆರೋಗ್ಯ ಹಾಗೂ ಮಾನವ ಹಕ್ಕಿನ ದೃಷ್ಟಿಯಿಂದ ಅತ್ಯಾವಶ್ಯಕವಾಗಿದೆ. : ಉಮ್ಮರ್ ಕೆ ಎಸ್ . ಮಾಜಿ ನಗರ ಪಂಚಾಯತ್ ಸದಸ್ಯರು

ಸುಳ್ಯ : ಈ ವರದಿ ಓದುವಾಗ ಆಶ್ಚರ್ಯ ಎನಿಸಬಹುದು, ಆದರೆ ಇದು ನಿಜವಾದ ಸಮಸ್ಯೆ, ಸುಳ್ಯ ನಗರದ ಸನಿಹದಲ್ಲಿರುವ ವಿಷ್ಣು ಸರ್ಕಲ್, ಕಲ್ಲುಮುಟ್ಲು ವಾರ್ಡ್‌ನ ವ್ಯಾಪ್ತಿಗೆ ಸೇರಿರುವ ಸುಳ್ಯ ಕಸಬಾ ಗ್ರಾಮದ ಭಾಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಶುದ್ಧ ನಳ್ಳಿ ನೀರಿನ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ನಂಬಲು ಕಷ್ಟವಾದರೂ, ಈ ಪ್ರದೇಶದ ಜನರು ನಾಲ್ಕು ವರ್ಷಗಳಿಂದ ನಗರ ಪಂಚಾಯಿತಿಯ ನಳ್ಳಿ ನೀರಿನ ಧಾರೆಯ ನಿರೀಕ್ಷೆಯಲ್ಲಿದ್ದಾರೆ. ಸಾರ್ವಜನಿಕರ ಪ್ರಕಾರ, ನೀರು ಸರಬರಾಜಿನ ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ಸ್ಥಳೀಯ ಜನ ಪ್ರತಿನಿಧಿಯ ಆಸಡ್ಡೆ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಇದರ ಪರಿಣಾಮವಾಗಿ ನಿವಾಸಿಗಳು ಕುಡಿಯುವ ಶುದ್ಧ ನೀರಿನಿಂದ ವಂಚಿತರಾಗಿದ್ದಾರೆ.
ಸ್ಥಳೀಯವಾಗಿ ಕೊರೆದ ಕೊಳವೆ ಬಾವಿಯ ನೀರು ದಿನನಿತ್ಯ ಬಳಕೆಗೆ ಸರಬರಾಜಾಗುತ್ತಿದೆಯಾದರೂ, ಅದು ನಿರಂತರ ಬಳಕ್ಕೆಗೆ ಯೋಗ್ಯವಾಗಿಲ್ಲ. ಪರಿಸರವಾಸಿಗಳ ಪ್ರಕಾರ, ಈ ನೀರಿನಲ್ಲಿ ಅತಿಯಾದ ಕಬ್ಬಿಣಾಂಶ ಮತ್ತು ಮಿಶ್ರಿತ ಅಶುದ್ಧತೆಗಳು ಕಂಡುಬರುತ್ತಿವೆ. ಅದು ಕುಡಿಯಲು ಅಥವಾ ಅಡುಗೆಗೆ ಯೋಗ್ಯವಲ್ಲದ ಕಾರಣ, ಅನೇಕ ಕುಟುಂಬಗಳು ಆರೋಗ್ಯದ ಬಗ್ಗೆ ಆತಂಕಗೊಂಡಿವೆ. ದಿನನಿತ್ಯದ ಅಗತ್ಯಗಳಿಗೆ ನೀರಿನ ಕೊರತೆಯಿಂದ ಜನಜೀವನ ಹದಗೆಟ್ಟಿದ್ದು, ಸಾರ್ವಜನಿಕರು ಮೂಲಭೂತ ಸೌಕರ್ಯಗಳ ಕೊರತೆಯ ವಿರುದ್ಧ ಕಳಕಳಿಯಿಂದ ಧ್ವನಿಯೆತ್ತಿದ್ದಾರೆ. ಇದೀಗ ವಿಷ್ಣು ಸರ್ಕಲ್ ಪರಿಸರದ ನಿವಾಸಿಗಳು ಸಾಮಾಜಿಕ ಕಾರ್ಯಕರ್ತ,ಮಾಜಿ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ನೇತೃತ್ವದಲ್ಲಿ ಸಮಸ್ಯೆ ತುರ್ತಾಗಿ ಪರಿಹರಿಸಲು ನಗರ ಪಂಚಾಯತ್ ಗೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಇಂದು ಪಂಚಾಯತ್ ನಲ್ಲಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆದಿದೆ, ಅತೀ ಶೀಘ್ರವಾಗಿ ಸಮಸ್ಯೆ ಪರಿಹಾರ ಆಗಬಹುದು ಎಂಬ ವಿಶ್ವಾಸ ಕೆ ಎಸ್ ಉಮ್ಮರ್ ರವರು ವ್ಯಕ್ತಪಡಿಸಿದ್ದಾರೆ. ಶಿಲ್ಪ ಅಬ್ಬುಲ,ಎಂ ಎ ಮನೀರ್,ಕುಂಬ್ಳೆ ಲತೀಫ್,ಕುಂಬ್ಳೆ ಫಾರೂಕ್,ಮುನೀರ್ ಬೆಳ್ಳಾರೆ ಮುಂತಾದವರು ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು






Scroll To Top