ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಶಾಹಿದ್ ತೆಕ್ಕಿಲ್ ಅವರಿಗೆ ಸಚಿವ ದರ್ಜೆ ಸ್ಥಾನಮಾನ
ರಾಜ್ಯದ ಕಾರ್ಮಿಕರ ಹಿತದೃಷ್ಟಿಯಿಂದ ಕಾರ್ಮಿಕ ಕನಿಷ್ಠ ವೇತನ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ, ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್ ಅವರಿಗೆ ರಾಜ್ಯ ಸರಕಾರ ಸಚಿವ ದರ್ಜೆ ಸ್ಥಾನಮಾನ ನೀಡಿದೆ. ದೀರ್ಘ ರಾಜಕೀಯ ಹಾಗೂ ಸಾಮಾಜಿಕ ಅನುಭವ ಹೊಂದಿರುವ ಶಾಹಿದ್ ತೆಕ್ಕಿಲ್ ಅವರ ನೇತೃತ್ವದಲ್ಲಿ ಕಾರ್ಮಿಕರ ಕನಿಷ್ಠ ವೇತನ ಹಾಗೂ ಕಲ್ಯಾಣ ಸಂಬಂಧಿತ ವಿಚಾರಗಳಿಗೆ ಮತ್ತಷ್ಟು ಬಲ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಬೆಂಗಳೂರು
ರಾಜ್ಯದಲ್ಲಿ ಸುಮಾರು ಮೂರು ಕೋಟಿಗೂ ಅಧಿಕ ವಿವಿಧ ವರ್ಗದ ಕಾರ್ಮಿಕರನ್ನು ಪ್ರತಿನಿಧಿಸುವ “ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ” ಅಧ್ಯಕ್ಷರಿಗೆ ಸಚಿವ ದರ್ಜೆಯ ಸ್ಥಾನಮಾನ ನೀಡುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಹುದ್ದೆಯನ್ನು ವಹಿಸಿಕೊಂಡಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರಿಗೆ ಸಚಿವ ಸ್ಥಾನಮಾನ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಕಾರ್ಮಿಕರ ಸಮಸ್ಯೆಗಳ ಕುರಿತು ಇರುವ ವಿಶೇಷ ಕಾಳಜಿಯ ಹಿನ್ನೆಲೆ, ಕಾರ್ಮಿಕರ ಕನಿಷ್ಠ ವೇತನಕ್ಕೆ ಸಂಬಂಧಿಸಿದ ವಿಷಯಗಳ ಚರ್ಚೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶ, ಇತರ ರಾಜ್ಯಗಳಲ್ಲಿ ಅಧ್ಯಯನ ಪ್ರವಾಸ ಹಾಗೂ ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಅಂಶಗಳನ್ನು ಪರಿಗಣಿಸಿ, ಮಂಡಳಿ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ ನೀಡಲಾಗಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ.

ಸಮಾಜ ಸೇವೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತು ಮೂಡಿಸಿರುವ ಕ್ರಿಯಾಶೀಲ ರಾಜಕಾರಣಿ ಹಾಗೂ ರಾಜ್ಯದ ಪ್ರಭಾವಿ ಯುವ ನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು 1987ರಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದಾರೆ.
ಅವರು ಸುಳ್ಯ ತಾಲೂಕು ಎನ್ಎಸ್ಯುಐ ಪ್ರಧಾನ ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾ ಎನ್ಎಸ್ಯುಐ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ, ರಾಜ್ಯ ಎನ್ಎಸ್ಯುಐ ಪ್ರಧಾನ ಕಾರ್ಯದರ್ಶಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರಾಜ್ಯ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ವಕ್ತಾರ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಕೊಡಗು ಜಿಲ್ಲಾ ಸದಸ್ಯತ್ವ ನೋಂದಣಿ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಸದಸ್ಯತ್ವ ನೋಂದಣಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ ಸದಸ್ಯರನ್ನು ನೋಂದಾಯಿಸಿದ ಸಾಧನೆ ಇವರದ್ದಾಗಿದೆ. ಪಕ್ಷದ ಸಾಂಸ್ಥಿಕ ಚುನಾವಣೆಯಲ್ಲಿ ಮಲಪ್ಪುರಂ ಜಿಲ್ಲೆಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, 2001ರಲ್ಲಿ ರಾಜ್ಯ ಯುವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸುಳ್ಯ ಅಲ್ಪಸಂಖ್ಯಾತರ ಸಹಕಾರಿ ಸಂಘದಲ್ಲಿ ಮೂರು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇದಲ್ಲದೆ, ಅವರು ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯರಾಗಿ, ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯರಾಗಿ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ, ಎರಡು ಬಾರಿ ಕೇಂದ್ರ ಸರಕಾರದ ನಾರು ಮಂಡಳಿ ಸದಸ್ಯರಾಗಿ ಹಾಗೂ ರಾಜ್ಯದ ರಾಜೀವ್ ಯೂತ್ ಫೌಂಡೇಶನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾಗಿರುವ ಅವರು, ಸಂಪಾಜೆ ಗ್ರಾಮದ ಗೂನಡ್ಕ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಸಂಪಾಜೆ–ಪೇರಡ್ಕ–ಗೂನಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ವಲಿಯುಲ್ಲಾಹಿ ದರ್ಗಾ ಶರೀಫ್ ಅಧ್ಯಕ್ಷರಾಗಿದ್ದು, ಅರಂತೋಡು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ನ ಗೌರವಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ವಿದ್ಯಾರ್ಥಿ, ಯುವಜನ ಹಾಗೂ ಕಾರ್ಮಿಕ ಹೋರಾಟಗಳಲ್ಲಿ ರಾಜ್ಯಮಟ್ಟದಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಅವರು, ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಪಕ್ಷದ ವಿವಿಧ ಹಂತಗಳಲ್ಲಿ ಉಸ್ತುವಾರಿ ಹಾಗೂ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಎನ್ಎಸ್ಯುಐ, ಐವೈಸಿ ಹಾಗೂ ಎಐಸಿಸಿ ವೀಕ್ಷಕರಾಗಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ, ಲಕ್ಷದೀಪ್ ಮತ್ತು ಅಂಡಮಾನ್–ನಿಕೋಬಾರ್ ದ್ವೀಪಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಹಾಸನ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.


Scroll To Top