ಇತರೆ

“ಗಣತಂತ್ರದ ಉಳಿವಿಗಾಗಿ ಸಂವಿಧಾನದ ಸಂರಕ್ಷಣೆ ಅನಿವಾರ್ಯ” – ಸುಳ್ಯದಲ್ಲಿ SDPI ವತಿಯಿಂದ ಗಣರಾಜ್ಯೋತ್ಸವ ಆಚರಣೆ

ಸುಳ್ಯ: ದೇಶದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಸಂಕಲ್ಪದೊಂದಿಗೆ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಭಾರತದ 77ನೇ ಗಣರಾಜ್ಯೋತ್ಸವ ಅಂಗವಾಗಿ ಗಾಂಧಿನಗರದ ಕಛೇರಿ ಮುಂಭಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಕಲಾಂ, “ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯು ಸಂವಿಧಾನದ ಮೇಲೆ ನಿಂತಿದೆ. ಫ್ಯಾಸಿಸಂನಂತಹ ಶಕ್ತಿಗಳನ್ನು ಸೋಲಿಸಿ, ಗಣತಂತ್ರವನ್ನು ಸಂರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಪ್ರತಿಯೊಬ್ಬ ಭಾರತೀಯನೂ ಸಂವಿಧಾನದ ಆಶಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ಒತ್ತಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮಿರಾಜ್ ಸುಳ್ಯ ರವರು ಸಂವಿಧಾನದ ಪ್ರತಿಜ್ಞಾ ವಿಧಿ ಬೋದಿಸಿದರು.

ಸುಳ್ಯ ವಿಧಾನಸಭಾ ಸಮಿತಿ ಸದಸ್ಯರಾದ ರಶೀದ್ ಗೂನಡ್ಕ ರವರು ಗಣರಾಜ್ಯೋತ್ಸವದ ಸಂದೇಶ ನೀಡಿ, ದೇಶದ ಐಕ್ಯತೆ ಮತ್ತು ಸಮಾನತೆಯ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು.

ಸುಹೈಲ್ ಸುಳ್ಯ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಮತ್ತು ಕಾರ್ಯಕರ್ತರನ್ನು ಆತ್ಮೀಯವಾಗಿ ಸ್ವಾಗತಿಸಿದರು.ಮುನೀರ್ ಸುಳ್ಯ ರವರು ಧನ್ಯವಾದಗೈದರು. ವೇದಿಕೆಯಲ್ಲಿ ಸುಳ್ಯ ಬ್ಲಾಕ್ ಅಧ್ಯಕ್ಷರಾದ ಸಿದ್ಧಿಕ್ ಸಿ.ಎ. ಉಪಸ್ಥಿತರಿದ್ದರು.