ಸಿ ಇ ಐ ಆರ್ ಮೂಲಕ ಸುಳ್ಯ ಪೊಲೀಸರ ಕಾರ್ಯಚಾತುರ್ಯ: ಮೂರು ವರ್ಷಗಳ ಹಿಂದೆ ಕಳೆದುಹೋದ ಮೊಬೈಲ್ ಬಿಹಾರದಲ್ಲಿ ಪತ್ತೆ!
ಸುಳ್ಯ: ಕಳ್ಳತನವಾಗಿ ಕೈಮಾರುತ್ತಿದ್ದ ಮೊಬೈಲ್ ಫೋನ್ ಅನ್ನು ಕೊನೆಗೂ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಸುಳ್ಯ ಪೊಲೀಸರ ಕಾರ್ಯಚಾತುರ್ಯ ಮತ್ತೊಮ್ಮೆ ಪ್ರಶಂಸೆಗೆ ಪಾತ್ರವಾಗಿದೆ.

ಏ 21ರಂದು ಸುಳ್ಯ ಪೊಲೀಸ್ ಠಾಣೆಯ ಎ ಎಸ್ ಐ ತಾರನಾಥ್ ಹಾಗೂ ಪೋರ್ಟಲ್ ತನಿಖಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಡ್ ಕಾನ್ಸೆಬಲ್ ನವೀನ್, ಸಿಬ್ಬಂದಿ ಶ್ರೀಶೈಲ್ ರವರು ಮೊಬೈಲ್ ಫೋನನ್ನು ವಾರಿಸುದಾರರಿಗೆ ಹಸ್ತಾಂತರಿಸಿದ್ದಾರೆ.
2023ರಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದ ನಗರ ಸಾರಿಗೆ ಬಸ್ಸಿನಲ್ಲಿ ಕಳ್ಳತನವಾಗಿದ್ದ ಮೊಬೈಲ್ ಫೋನ್, ಸುಮಾರು ಒಂಬತ್ತು ಮಂದಿಯ ಕೈಬದಲಾವಣೆ ಕಂಡು ಕೊನೆಗೆ ಬಿಹಾರದಲ್ಲಿ ಇರುವುದಾಗಿ ಸುಳ್ಯ ಪೊಲೀಸರು ಸಿ ಇ ಐ ಆರ್ (CEIR) ಪೋರ್ಟಲ್ ಮೂಲಕ ಪತ್ತೆಹಚ್ಚಿದ್ದಾರೆ. ಈ ಕಾರ್ಯಾಚರಣೆ ಪೊಲೀಸ್ ಇಲಾಖೆಯ ತಂತ್ರಜ್ಞಾನ ಬಳಕೆಯ ಸಾಮರ್ಥ್ಯವನ್ನು ಸ್ಪಷ್ಟವಾಗಿ ತೋರಿಸಿದೆ.
ಈ ಮೊಬೈಲ್ ಫೋನ್ ಪತ್ರಕರ್ತ ಹಸೈನಾರ್ ಜಯನಗರವರ ಸಹೋದರರಿಗೆ ಸೇರಿದ್ದು, ಕಳ್ಳತನದ ಬಳಿಕ 2023ರಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಸಿ ಇ ಐ ಆರ್ ಪೋರ್ಟಲ್ ಮೂಲಕ ದೂರು ದಾಖಲಿಸಲಾಗಿತ್ತು. ದೂರು ಆಧಾರವಾಗಿ ತನಿಖೆ ಕೈಗೊಂಡ ಪೊಲೀಸರು ತಂತ್ರಜ್ಞಾನದ ಸಹಾಯದಿಂದ ದೂರದ ಬಿಹಾರ ರಾಜ್ಯದಲ್ಲಿ ಫೋನ್ ಇರುವುದನ್ನು ಪತ್ತೆಹಚ್ಚಿ, ಅದನ್ನು ವಶಕ್ಕೆ ಪಡೆದು ಮೂಲ ಮಾಲೀಕರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ರೀತಿಯಲ್ಲಿ, ಕಳೆದ ಮೂರು ತಿಂಗಳಲ್ಲಿ ಸುಳ್ಯ ಪೊಲೀಸರು ಸುಮಾರು 38 ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಈ ಸಾಧನೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತ್ಯಧಿಕ ಮೊಬೈಲ್ ಫೋನ್ ಪತ್ತೆಹಚ್ಚಿದ ಪೊಲೀಸ್ ತಂಡವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸುಳ್ಯ ಪೊಲೀಸರ ಈ ಸಾಧನೆ ಕೇವಲ ಕಳ್ಳತನ ಪ್ರಕರಣಗಳ ಭೇದನೆ ಮಾತ್ರವಲ್ಲ, ಸಾರ್ವಜನಿಕರಲ್ಲಿ ವಿಶ್ವಾಸವನ್ನು ಹೆಚ್ಚಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ತಂತ್ರಜ್ಞಾನ ಮತ್ತು ಕಠಿಣ ಪರಿಶ್ರಮದ ಸಮನ್ವಯದಿಂದ ಪೊಲೀಸರು ಜನಸೇವೆಯಲ್ಲಿ ಹೊಸ ಮಾನದಂಡವನ್ನು ನಿರ್ಮಿಸುತ್ತಿದ್ದಾರೆ.
ಸುಳ್ಯ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ.
ಇತ್ತಿಚಿನ ದಿನಗಳಲ್ಲಿ ಸುಳ್ಯ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಶಾಂತಿ–ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳು ಗಮನಾರ್ಹವಾಗಿವೆ. ಮಾದಕ ದ್ರವ್ಯಗಳು ಮತ್ತು ಇತರ ಮಾದಕ ವಸ್ತುಗಳ ಅಕ್ರಮ ವ್ಯಾಪಾರದಲ್ಲಿ ತೊಡಗಿರುವ ಪೆಡ್ಲರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇದಕ್ಕೆ ಜೊತೆಗೆ, ಜೂಜಾಟ ಹಾಗೂ ಅಕ್ರಮ ಕೋಳಿ ಅಂಕ ಅಡ್ಡೆಗಳ ಮೇಲೆ ನಿರಂತರ ದಾಳಿಗಳನ್ನು ನಡೆಸಿ, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ.
ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ತೋರಿಸುತ್ತಿರುವ ಚುರುಕುತನ ಹಾಗೂ ಜನಸೇವೆಯ ಬದ್ಧತೆ, ಇಲಾಖೆಯ ಮೇಲೆ ಜನರ ವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದೆ.
ಒಟ್ಟಾರೆ, ಇಂತಹ ಸಾಧನೆಗಳು ಸುಳ್ಯ ಪೊಲೀಸರ ಸೇವಾ ಮನೋಭಾವ ಮತ್ತು ಕಾರ್ಯನಿಷ್ಠೆಗೆ ಸ್ಪಷ್ಟ ಉದಾಹರಣೆಯಾಗಿವೆ.







m


Scroll To Top