Featured, ಇತರೆ, ಸ್ಥಳೀಯ

ಜ್ಞಾನಲೋಕದ ಧ್ರುವತಾರೆ, ಮಹಾನ್ ವಿದ್ವಾಂಸ ಆಲಿಕುಟ್ಟಿ ಉಸ್ತಾದ್ ಇನ್ನಿಲ್ಲ: ಟಿ.ಎಂ ಶಾಹಿದ್ ತೆಕ್ಕಿಲ್ ಸಂತಾಪ

ಇಸ್ಲಾಮಿಕ್ ಜಗತ್ತಿನ ಖ್ಯಾತ ವಿದ್ವಾಂಸ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಹಾಗೂ ಜಾಮಿಅ ನೂರಿಯ್ಯಾದ ಪ್ರಿನ್ಸಿಪಾಲ್ (ಶೈಖುಲ್ ಜಾಮಿಅ) ಪ್ರೊ. ಕೆ. ಆಲಿಕುಟ್ಟಿ ಉಸ್ತಾದ್ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಾಹಿದ್ ತೆಕ್ಕಿಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶೋಕ ವ್ಯಕ್ತಪಡಿಸಿರುವ ಅವರು, ಉಸ್ತಾದರ ಅಗಲಿಕೆಯು ಮುಸ್ಲಿಂ ಉಮ್ಮತ್‌ಗೆ ಹಾಗೂ ಜ್ಞಾನಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ಸ್ಮರಿಸಿದ್ದಾರೆ. ತಮ್ಮ ಅಸಾಧಾರಣ ಬುದ್ಧಿಮತ್ತೆ ಹಾಗೂ ಆಳವಾದ ಧಾರ್ಮಿಕ ಜ್ಞಾನದಿಂದಾಗಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ‘ಖಾಝಿ’ ಹುದ್ದೆಗೇರಿದ ಕೀರ್ತಿ ಇವರದ್ದು. ಅಂದಿನಿಂದ ದಶಕಗಳ ಕಾಲ ಸಮುದಾಯಕ್ಕೆ ಅವರು ದಾರಿದೀಪವಾಗಿದ್ದರು. ಪ್ರಸಿದ್ಧ ಧಾರ್ಮಿಕ ಕೇಂದ್ರ ‘ಉಮ್ಮುಲ್ ಮದಾರಿಸ್’ನಿಂದ ಶಿಕ್ಷಣ ಆರಂಭಿಸಿದ ಅವರು, ಜಾಗತಿಕ ಮಟ್ಟದ ಮುಸ್ಲಿಂ ವಿದ್ವಾಂಸರ ವೇದಿಕೆಗಳಲ್ಲಿ ಭಾರತೀಯ ಮುಸ್ಲಿಂ ಸಮುದಾಯವನ್ನು ಅತ್ಯಂತ ಯಶಸ್ವಿಯಾಗಿ ಪ್ರತಿನಿಧಿಸಿದ ಮಹಮೇಧಾವಿ. ಅರೇಬಿಕ್, ಇಂಗ್ಲಿಷ್, ಉರ್ದು ಹಾಗೂ ಮಲಯಾಳಂ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು, ತಮ್ಮ ವಿದ್ವತ್ಪೂರ್ಣ ಭಾಷಣಗಳು ಹಾಗೂ ಇಸ್ಲಾಮಿಕ್ ಗ್ರಂಥಗಳ ರಚನೆಯ ಮೂಲಕ ಗಮನ ಸೆಳೆದಿದ್ದರು. ಜಾಮಿಅ ನೂರಿಯ್ಯಾದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಧಾರ್ಮಿಕ ಮತ್ತು ಭೌತಿಕ ಜ್ಞಾನಧಾರೆ ಎರೆದ ಇವರು, ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ‘ಸಮಸ್ತ’ ಸಂಘಟನೆಯನ್ನು ಅತ್ಯಂತ ದಕ್ಷತೆಯಿಂದ ಮುನ್ನಡೆಸಿದ್ದರು.
“ಸದಾ ಜನಸಾಮಾನ್ಯರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ ಹಾಗೂ ಸಾಧು ಸ್ವಭಾವದ ಉಸ್ತಾದರ ದೀನಿ ಸೇವೆಗಳನ್ನು ಅಲ್ಲಾಹು ಸ್ವೀಕರಿಸಲಿ. ಅವರಿಗೆ ಜನ್ನತುಲ್ ಫಿರ್ದೌಸ್ (ಉನ್ನತ ಸ್ವರ್ಗ) ಕರುಣಿಸಲಿ. ಅವರ ಕುಟುಂಬ ವರ್ಗ ಹಾಗೂ ಅಪಾರ ಶಿಷ್ಯವೃಂದಕ್ಕೆ ಈ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲಿ” ಎಂದು ಟಿ.ಎಂ ಶಾಹಿದ್ ತೆಕ್ಕಿಲ್ ಪ್ರಾರ್ಥಿಸಿದ್ದಾರೆ.
m