ಇತರೆ, ಸ್ಥಳೀಯ

ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ರ‍್ಯಾಗಿಂಗ್ ಆರೋಪ: ಇಬ್ಬರು ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಮೇಲೆ ಹಲ್ಲೆ; ಆರು ಹಿರಿಯ ವಿದ್ಯಾರ್ಥಿಗಳ ಬಂಧನ

ಮಂಗಳೂರು, ಆ. 5: ನಗರದ ಶ್ರೀನಿವಾಸ ಕಾಲೇಜಿನಲ್ಲಿ ರ‍್ಯಾಗಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇಬ್ಬರು ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಪಾಂಡೇಶ್ವರ ಪೊಲೀಸರು ಆರು ಹಿರಿಯ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಗಾಯಗೊಂಡ ವಿದ್ಯಾರ್ಥಿಗಳಾದ ಆದರ್ಶ್ ಮತ್ತು ಜಾಸಿನ್ ಖಾದರ್ ನೀಡಿದ ದೂರಿನ ಪ್ರಕಾರ, ಕಾಲೇಜು ಸಮೀಪದ ಅಂಗಡಿಗೆ ಚಹಾ ಕುಡಿಯಲು ತೆರಳಿದ್ದ ವೇಳೆ ಹಿರಿಯ ವಿದ್ಯಾರ್ಥಿಗಳು ಅವರನ್ನು ತಡೆದು, ಕಪ್ಪು ಶೂ ಧರಿಸಿದ್ದ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಪೋಷಕರ ಬಗ್ಗೆಯೂ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಲ್ಲೆಯ ವೇಳೆ ಆದರ್ಶ್ ಅವರ ತಲೆಯನ್ನು ಬಲವಂತವಾಗಿ ಹಿಡಿದು ತಿರುಗಿಸಿದ್ದು, ಅವರಿಗೆ ಕುತ್ತಿಗೆಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರ ಕುತ್ತಿಗೆಗೆ ಕಾಲರ್ ಅಳವಡಿಸಿದ್ದಾರೆ. ಜಾಸಿನ್ ಖಾದರ್ ಅವರಿಗೂ ಹಲ್ಲೆಯಿಂದ ಗಾಯಗಳಾಗಿವೆ.
ಘಟನೆಯಿಂದ ಭಯಗೊಂಡ ಜಾಸಿನ್ ಹತ್ತಿರದ ಅಂಗಡಿಯಿಂದ ಪೊಲೀಸ್ ಠಾಣೆಗೆ ಕರೆ ಮಾಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದರು. ಬಳಿಕ ಅವರ ಹೇಳಿಕೆ ದಾಖಲಿಸಿಕೊಂಡು ಪ್ರಕರಣ ದಾಖಲಿಸಲಾಯಿತು.
ಪ್ರಕರಣ ಸಂಬಂಧ ಲಾಜಿಸ್ಟಿಕ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಆರು ಹಿರಿಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, ಎಲ್ಲರೂ ಕೇರಳ ಮೂಲದವರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಾಲೇಜು ಆಡಳಿತ ಮಂಡಳಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪ ಸಾಬೀತಾದಲ್ಲಿ ಸಂಬಂಧಿತ ವಿದ್ಯಾರ್ಥಿಗಳ ವಿರುದ್ಧ ಕಾಲೇಜಿನ ನಿಯಮಾನುಸಾರ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಪ್ರಕರಣದ ಕುರಿತು ಪಾಂಡೇಶ್ವರ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
m