ಬೆಳ್ಳಾರೆ: ಅಭಿವೃದ್ಧಿಯ ಮಾತುಗಳು ವೇದಿಕೆಗಳಲ್ಲಿ ಘೋಷಣೆಯಾಗುತ್ತಿದ್ದರೂ, ನೆಲಮಟ್ಟದಲ್ಲಿ ಜನರು ಎದುರಿಸುತ್ತಿರುವ ಮೂಲಸೌಕರ್ಯ ಸಮಸ್ಯೆಗಳು ಇನ್ನೂ ಪರಿಹಾರ ಕಾಣದೆ ಉಳಿದಿವೆ. ಬೆಳ್ಳಾರೆ ಗ್ರಾಮದ ನೆಟ್ಟಾರು–ಇಂದಿರಾನಗರ–ದೇವರಗುಂಡಿ ಸಂಪರ್ಕಿಸುವ ಸುಮಾರು ಒಂದೂವರೆ ಕಿಲೋಮೀಟರ್ ರಸ್ತೆಯು ದಶಕಗಳಿಂದ ಡಾಮರೀಕರಣ ಅಥವಾ ಕಾಂಕ್ರಿಟೀಕರಣವಾಗದೆ ಸ್ಥಳೀಯರ ಬದುಕನ್ನು ಸಂಕಷ್ಟಕ್ಕೆ ದೂಡಿದೆ.

ಮಳೆಗಾಲ ಆರಂಭವಾದಾಗ ಈ ರಸ್ತೆ ಸಂಪೂರ್ಣ ಕೆಸರಿನಿಂದ ಆವೃತವಾಗಿ, ಕಂಬಳದ ಕೆರೆಯನ್ನು ಹೋಲುವಂತಾಗುತ್ತದೆ. ಪರಿಣಾಮ ಶಾಲೆ, ಕಾಲೇಜು ಹಾಗೂ ಮದರಸ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು ಮತ್ತು ವಾಹನ ಸವಾರರು ಪ್ರತಿದಿನ ಜೀವದ ಹಂಗು ತೊರೆದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸೇರಿದಂತೆ ಅಗತ್ಯ ಸೇವೆಗಳ ಸಂಚಾರವೂ ಕಷ್ಟಕರವಾಗುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.
ಸ್ಥಳೀಯರ ಪ್ರಕಾರ, ಈ ರಸ್ತೆಯ ಅಭಿವೃದ್ಧಿಗಾಗಿ ಈ ಹಿಂದಿನ ಶಾಸಕ ಹಾಗೂ ಮಾಜಿ ಸಚಿವ ಎಸ್. ಅಂಗಾರ ಮತ್ತು ಹಾಲಿ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಬೆಳ್ಳಾರೆ ಗ್ರಾಮ ಪಂಚಾಯತ್‌ನ ವಿವಿಧ ಅವಧಿಯ ಅಧ್ಯಕ್ಷರು ಹಾಗೂ ಸಂಬಂಧಿತ ಅಧಿಕಾರಿಗಳ ಗಮನಕ್ಕೂ ವಿಷಯವನ್ನು ತರಲಾಗಿದ್ದರೂ, ಇದುವರೆಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ ಎನ್ನುವುದು ನಿವಾಸಿಗಳ ಆರೋಪ.

“ಅಭಿವೃದ್ಧಿ ಎಲ್ಲರ ಮನೆ ಬಾಗಿಲಿಗೆ ತಲುಪಿದೆ” ಎಂಬ ಘೋಷಣೆಗಳ ನಡುವೆಯೇ, ಮೂಲಭೂತ ರಸ್ತೆಯೊಂದನ್ನು ನಿರ್ಮಿಸಲು ಸಾಧ್ಯವಾಗದಿರುವುದು ಜನಪ್ರತಿನಿಧಿಗಳು ಹಾಗೂ ಆಡಳಿತ ವ್ಯವಸ್ಥೆಯ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.
ಮುಂದಿನ ಬೇಸಿಗೆಯೊಳಗೆ ಈ ರಸ್ತೆಯನ್ನು ಆದ್ಯತೆಯ ಮೇರೆಗೆ ಡಾಮರೀಕರಣ ಅಥವಾ ಕಾಂಕ್ರಿಟೀಕರಣ ಮಾಡಿ, ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ರಸ್ತೆ ಫಲಾನುಭವಿಗಳ ಒಕ್ಕೊರಲಿನ ಆಗ್ರಹವಾಗಿದೆ.




m
