ಸ್ಥಳೀಯ

ಮಂಗಳೂರು: ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಸರ್ವರ್ ದೋಷ; 300ಕ್ಕೂ ಹೆಚ್ಚು ಅರ್ಜಿದಾರರು ಪರದಾಟ

ಮಂಗಳೂರು: ಆಗಸ್ಟ್ 11 ನಗರದ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಸರ್ವರ್ ದೋಷ ಕಾಣಿಸಿಕೊಂಡ ಪರಿಣಾಮ ಮಂಗಳವಾರ 300ಕ್ಕೂ ಹೆಚ್ಚು ಅರ್ಜಿದಾರರು ತೀವ್ರ ತೊಂದರೆ ಅನುಭವಿಸಿದ ಘಟನೆ ವರದಿಯಾಗಿದೆ

ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಪಡೆಯಲು ಮುಂಜಾನೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿದಾರರು ಸೇವಾ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ ಸರ್ವರ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಅರ್ಜಿ ಪ್ರಕ್ರಿಯೆ ಸೇರಿದಂತೆ ಹಲವು ಸೇವೆಗಳು ಸ್ಥಗಿತಗೊಂಡವು.
ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ದೂರದ ಊರುಗಳಿಂದ ಆಗಮಿಸಿದ್ದ ಅರ್ಜಿದಾರರು ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದರು. ನಿಗದಿತ ಸಮಯಕ್ಕೆ ಸೇವೆ ದೊರೆಯದ ಕಾರಣ ಕೆಲವರು ತಮ್ಮ ಕೆಲಸಗಳನ್ನು ಮುಂದೂಡಬೇಕಾಯಿತು.

ಮಂಗಳೂರು ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಸರ್ವರ್ ದೋಷ ಕಾಣಿಸಿಕೊಂಡು ಅರ್ಜಿದಾರರು ತೊಂದರೆ ಅನುಭವಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇದೇ ಕಚೇರಿಯಲ್ಲಿ ಎರಡು–ಮೂರು ಬಾರಿ ಸರ್ವರ್ ದೋಷ ಉಂಟಾಗಿ ಅರ್ಜಿದಾರರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಹಲವು ಬಾರಿ ವರದಿಗಳೂ ಪ್ರಕಟವಾಗಿದ್ದವು.

ಸರ್ವರ್ ದೋಷವನ್ನು ಸರಿಪಡಿಸಿ ಸೇವೆಗಳನ್ನು ಶೀಘ್ರವಾಗಿ ಪುನರಾರಂಭಿಸುವಂತೆ ಅರ್ಜಿದಾರರು ಅಧಿಕಾರಿಗಳನ್ನು ಒತ್ತಾಯಿಸಿದರು. ತಾಂತ್ರಿಕ ಸಮಸ್ಯೆ ಪರಿಹಾರಗೊಂಡ ಬಳಿಕ ಬಾಕಿ ಉಳಿದಿರುವ ಅರ್ಜಿದಾರರ ಸೇವಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ.

m