Featured, ಇತರೆ, ಸ್ಥಳೀಯ

ಎಸ್‌ಐಆರ್‌: ಅನಿವಾಸಿ ಭಾರತೀಯರಿಗೆ ಬದಲಿ ವ್ಯವಸ್ಥೆ ಕಲ್ಪಿಸಲು ಆಪ್ ಮನವಿ

ಸುಳ್ಯ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅನಿವಾಸಿ ಭಾರತೀಯರು (NRI) ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ಸುಳ್ಯ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

 

ವಿದೇಶಗಳಲ್ಲಿ ಉದ್ಯೋಗ ಹಾಗೂ ವಿವಿಧ ಕಾರಣಗಳಿಂದ ನೆಲೆಸಿರುವ ಅನಿವಾಸಿ ಭಾರತೀಯರಿಗೆ SIR ಪ್ರಕ್ರಿಯೆಯ ನಿಗದಿತ ಅವಧಿಯಲ್ಲಿ ಭಾರತಕ್ಕೆ ಆಗಮಿಸಿ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಪ್ರಾಯೋಗಿಕವಾಗಿ ಕಷ್ಟಕರವಾಗಿದೆ. ಪಾಸ್‌ಪೋರ್ಟ್, ಉದ್ಯೋಗ ಒಪ್ಪಂದ, ವೀಸಾ, ರಜೆ ಸೇರಿದಂತೆ ಹಲವು ಕಾರಣಗಳಿಂದಾಗಿ ಅವರು ನೇರವಾಗಿ ಹಾಜರಾಗಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದ್ದರಿಂದ ಅನಿವಾಸಿ ಭಾರತೀಯರ ಸಮಸ್ಯೆಯನ್ನು ಪರಿಗಣಿಸಿ, ಆನ್‌ಲೈನ್ ಮೂಲಕ ಅಥವಾ ಅಧಿಕೃತ ಪ್ರತಿನಿಧಿಗಳ ಮೂಲಕ SIR ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸುವಂತಹ ಬದಲಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.

ಅನಿವಾಸಿ ಭಾರತೀಯರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಅಗತ್ಯ ಕ್ರಮ ಕೈಗೊಂಡು, ಅವರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ರಶೀದ್ ಜಟ್ಟಿಪಳ್ಳ, ಶಾಫಿ ಅಡ್ಕ, ರಾಮಕೃಷ್ಣ ಬೀರಮಂಗಿಲ, ಆಬಿದ್ (ಶೂ ಝೋನ್) ಹಾಗೂ ಅಝರುದ್ದೀನ್ ಜಟ್ಟಿಪಳ್ಳ ಉಪಸ್ಥಿತರಿದ್ದರು.