ಇತರೆ

ಕನ್ನಡ ಶಾಲೆಗಳ ಉಳಿವಿಗೆ ಐತಿಹಾಸಿಕ ಹೆಜ್ಜೆ : ಸೆ.16ರಿಂದ ‘ಕರ್ನಾಟಕ ಕನ್ನಡ ಯಾತ್ರೆ

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ಅವರ ನೇತೃತ್ವ

ಬದಿಯಡ್ಕ: ಕನ್ನಡ ಶಾಲೆಗಳ ಉಳಿವು, ಬೆಳವಣಿಗೆ ಹಾಗೂ ಕನ್ನಡ ಭಾಷೆಯ ಅಸ್ತಿತ್ವವನ್ನು ಬಲಪಡಿಸುವ ಉದ್ದೇಶದಿಂದ ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ, ಕರ್ನಾಟಕ ರಾಜ್ಯ’ ವತಿಯಿಂದ ಹಮ್ಮಿಕೊಂಡಿರುವ ‘ಕರ್ನಾಟಕ ಕನ್ನಡ ಯಾತ್ರೆ’ ಸೆಪ್ಟೆಂಬರ್ 16ರಂದು ಕಾಸರಗೋಡಿನ ಬದಿಯಡ್ಕದಿಂದ ಭವ್ಯವಾಗಿ ಆರಂಭಗೊಳ್ಳಲಿದೆ

ಬುಧವಾರ ಬೆಳಿಗ್ಗೆ 11 ಗಂಟೆಗೆ ಬದಿಯಡ್ಕದ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಸಭಾಂಗಣದಿಂದ ಯಾತ್ರೆಗೆ ಚಾಲನೆ ದೊರೆಯಲಿದೆ. ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ಪುತ್ರ ಶ್ರೀರಂಗನಾಥ ರೈ (ರಂಗಣ್ಣ) ಅವರು ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಕಯ್ಯಾರ ಕಿಞ್ಞಣ್ಣ ರೈ ಅವರ ಶಿಷ್ಯ ಹಾಗೂ ವಾಗ್ಮಿ ಶ್ಯಾಮ ಆಳ್ವ ಅವರು ವಿಷಯ ಮಂಡಿಸಲಿದ್ದು, ಕಾಸರಗೋಡು ಗಮಕ ಕಲಾಕೇಂದ್ರದ ಶಂಕರ್ ನಾರಾಯಣ ಭಟ್ ಅವರು ಕನ್ನಡ ಭಾಷೆ, ಸಾಹಿತ್ಯ ಹಾಗೂ ಕನ್ನಡ ಶಾಲೆಗಳ ಮಹತ್ವದ ಕುರಿತು ಮಾತನಾಡಲಿದ್ದಾರೆ.

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಯಾತ್ರೆ, ಕನ್ನಡ ಶಾಲೆಗಳ ಉಳಿವಿನೊಂದಿಗೆ ಕನ್ನಡ ನಾಡಿನ ಭಾಷಾ–ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ಸಾಗಲಿದೆ.ಕಾಸರಗೋಡಿನ ಕನ್ನಡದ ನೆಲದಲ್ಲಿ ಮೊಳಗಲಿರುವ ಈ ಯಾತ್ರೆ, ಕನ್ನಡದ ಕಂಪು, ಕಯ್ಯಾರರ ಕಾವ್ಯದ ಕಿಚ್ಚು ಹಾಗೂ ಕನ್ನಡ ಶಾಲೆಗಳ ಭವಿಷ್ಯದ ಆಶಯವನ್ನು ಹೊತ್ತು ಸಾಗುವ ಜನಜಾಗೃತಿ ಹೆಜ್ಜೆಯಾಗಲಿದೆ.

“ಕನ್ನಡ ಶಾಲೆ ಉಳಿಯಲಿ; ಕನ್ನಡದ ಭವಿಷ್ಯ ಬೆಳೆಯಲಿ” ಎಂಬ ಆಶಯದೊಂದಿಗೆ ನಡೆಯುವ ಈ ಕನ್ನಡಿಗರ ಯಾತ್ರೆಗೆ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಕ್ಷಿಯಾಗುವಂತೆ ಆಯೋಜಕರು ಮನವಿ ಮಾಡಿದ್ದಾರೆ.