ಜನನ–ಮರಣ ತಡ ನೋಂದಣಿಗೆ ಅಕ್ಟೋಬರ್ 1ರಿಂದ ಕಠಿಣ ನಿಯಮ
ಒಂದು ವರ್ಷ ಮೀರಿದರೆ ಅಧಿಕಾರಿಗಳ ಪರಿಶೀಲನೆ; ಎರಡು ವರ್ಷ ದಾಟಿದರೆ ಕೋರ್ಟ್ ಆದೇಶ ಕಡ್ಡಾಯ
ನವದೆಹಲಿ: ಜನನ ಹಾಗೂ ಮರಣದ ತಡವಾದ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಬಿಗಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ತಿದ್ದುಪಡಿ ಮಾಡಲಾದ ನಿಯಮಗಳು 2026ರ ಅಕ್ಟೋಬರ್ 1ರಿಂದ ದೇಶಾದ್ಯಂತ ಜಾರಿಗೆ ಬರಲಿದ್ದು, ಈ ಸಂಬಂಧ ಭಾರತದ ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.
ಒಂದು ವರ್ಷ ಮೀರಿದರೆ ಅಧಿಕಾರಿಗಳ ಪರಿಶೀಲನೆ
ಜನನ ಅಥವಾ ಮರಣ ಸಂಭವಿಸಿದ ದಿನಾಂಕದಿಂದ ಒಂದು ವರ್ಷ ಕಳೆದ ಬಳಿಕ ಮತ್ತು ಎರಡು ವರ್ಷಗಳ ಒಳಗೆ ನೋಂದಣಿಗೆ ಅರ್ಜಿ ಸಲ್ಲಿಸಿದರೆ, ಇನ್ನು ಮುಂದೆ ನೇರವಾಗಿ ನೋಂದಣಿ ಮಾಡಲು ಸಾಧ್ಯವಾಗುವುದಿಲ್ಲ.ಅಂತಹ ಅರ್ಜಿಗಳ ಸತ್ಯಾಸತ್ಯತೆಯನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ (AC) ಅಥವಾ ಅಧಿಕೃತ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಪರಿಶೀಲಿಸಬೇಕು. ನಿಗದಿತ ದಂಡಶುಲ್ಕ ಪಾವತಿಸಿದ ಬಳಿಕ ಅಧಿಕಾರಿಗಳ ಅನುಮತಿಯೊಂದಿಗೆ ಮಾತ್ರ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ
ಎರಡು ವರ್ಷ ದಾಟಿದರೆ ಕೋರ್ಟ್ ಆದೇಶ ಅನಿವಾರ್ಯ
ಜನನ ಅಥವಾ ಮರಣ ಸಂಭವಿಸಿ ಎರಡು ವರ್ಷಗಳಿಗಿಂತ ಹೆಚ್ಚು ವಿಳಂಬವಾದರೆ, ನಿಯಮಗಳು ಮತ್ತಷ್ಟು ಕಟ್ಟುನಿಟ್ಟಾಗಲಿವೆ. ಇಂತಹ ತಡವಾದ ನೋಂದಣಿಗೆ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (JMFC) ನ್ಯಾಯಾಲಯದ ಆದೇಶ ಪಡೆಯುವುದು ಕಡ್ಡಾಯವಾಗಲಿದೆ. ತೀವ್ರ ವಿಳಂಬದ ನೋಂದಣಿ ಅರ್ಜಿಗಳನ್ನು ಹೆಚ್ಚಿನ ಮಟ್ಟದ ಪರಿಶೀಲನೆಗೆ ಒಳಪಡಿಸುವ ಮೂಲಕ ದಾಖಲೆಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸುವ ಉದ್ದೇಶವನ್ನು ಈ ಕ್ರಮ ಹೊಂದಿದೆ.
ನಕಲಿ ದಾಖಲೆಗಳಿಗೆ ಕಡಿವಾಣ
1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಸೆಕ್ಷನ್ 13(3) ಕ್ಕೆ ತಿದ್ದುಪಡಿ ತರುವ ಮೂಲಕ ಈ ಬದಲಾವಣೆ ಜಾರಿಗೆ ತರಲಾಗುತ್ತಿದೆ. ನಾಗರಿಕರು ಜನನ ಹಾಗೂ ಮರಣದಂತಹ ಪ್ರಮುಖ ಘಟನೆಗಳನ್ನು ನಿಗದಿತ ಅವಧಿಯೊಳಗೆ ನೋಂದಾಯಿಸುವಂತೆ ಪ್ರೋತ್ಸಾಹಿಸುವುದು, ತಡವಾದ ನೋಂದಣಿಗಳಲ್ಲಿ ಸೂಕ್ತ ಪರಿಶೀಲನೆ ನಡೆಸುವುದು ಹಾಗೂ ನಕಲಿ ದಾಖಲೆಗಳ ಸೃಷ್ಟಿಗೆ ಕಡಿವಾಣ ಹಾಕುವುದು ಈ ತಿದ್ದುಪಡಿಯ ಪ್ರಮುಖ ಉದ್ದೇಶಗಳಾಗಿವೆ. ಹೀಗಾಗಿ, ಜನನ ಮತ್ತು ಮರಣದ ನೋಂದಣಿಯನ್ನು ಸಾಧ್ಯವಾದಷ್ಟು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವುದು ನಾಗರಿಕರಿಗೆ ಅನುಕೂಲಕರವಾಗಲಿದೆ.


Scroll To Top