31 ವರ್ಷ ಪುಟ್ಟ ಮಕ್ಕಳ ಆರೈಕೆಗೆ ಜೀವನ ಮುಡಿಪಾಗಿಟ್ಟ ಪುಷ್ಪಾವತಿಯವರ ಸೇವಾ ಮನೋಭಾವ ಆದರ್ಶ: ಕೆ.ಎಂ. ಮುಸ್ತಫ
ಸುಳ್ಯ: ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ 31 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿಯ ಅಂಚಿನಲ್ಲಿದ್ದಾಗಲೇ ನಿಧನರಾದ ಪುಷ್ಪಾವತಿ ಅವರಿಗೆ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಯಿತು. ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಶಹನಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಗಾಂಧಿನಗರ ಕೆಪಿಎಸ್ ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಭವಾನಿ ಟೀಚರ್ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಪುಷ್ಪಾವತಿ ಅವರ ಭಾವಚಿತ್ರಕ್ಕೆ ಗಣ್ಯರು ಹಾಗೂ ಉಪಸ್ಥಿತರಿದ್ದವರು ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ನುಡಿ ನಮನ ಸಲ್ಲಿಸಿದ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಮಾತನಾಡಿ, “ಬಡತನದಲ್ಲೂ ಹೃದಯ ಶ್ರೀಮಂತಿಕೆಯನ್ನು ಹೊಂದಿದ್ದ ಪುಷ್ಪಾವತಿಯವರು ನಿಸ್ವಾರ್ಥ ಸೇವೆಯ ಮೂಲಕ ಎಲ್ಲರನ್ನೂ ಪ್ರೀತಿಸುತ್ತಿದ್ದ ಸ್ನೇಹಜೀವಿಯಾಗಿದ್ದರು. ನಿವೃತ್ತಿಯ ದಿನದ ಬೀಳ್ಕೊಡುಗೆ ಕಾರ್ಯಕ್ರಮದ ಬಗ್ಗೆ ಅವರು ಅಪಾರ ಸಂತಸದಿಂದ ಮಾತನಾಡುತ್ತಿದ್ದರು. ಆದರೆ ನಿವೃತ್ತಿಯ ಅಂಚಿನಲ್ಲೇ ಇಹಲೋಕ ತ್ಯಜಿಸಿರುವ ಕರ್ಮಜೀವಿ ಪುಷ್ಪಕ್ಕ ಅವರ ಅಗಲಿಕೆ ಅಪಾರ ನೋವು ತಂದಿದೆ” ಎಂದು ಹೇಳಿದರು.
ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶೋಭಾ, ನಗರ ಪಂಚಾಯತ್ ಮಾಜಿ ಸದಸ್ಯರಾದ ಕೆ.ಎಸ್. ಉಮ್ಮರ್ ಹಾಗೂ ಶರೀಫ್ ಕಂಠಿ, ಸಿಡಿಪಿಒ ಕಚೇರಿ ಮೇಲ್ವಿಚಾರಕಿ ಉಷಾ, ಜೈ ಭಾರತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ಮಜೀದ್ ಕೆ.ಬಿ. ಹಾಗೂ ಎಸ್.ಎಂ. ಹನೀಫ್, ಬುಶ್ರಾ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಹೀದ್ ಪಾರೆ, ಆರೋಗ್ಯ ಇಲಾಖೆಯ ಕನಕಾಂಗಿ, ಉದ್ಯಮಿ ಶರವಣ್ ರಾಮ್, ಸ್ತ್ರೀಶಕ್ತಿ ಸದಸ್ಯೆ ತಾಹಿರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಕಾರ್ಯಕ್ರಮಕ್ಕೆ ಸ್ವಾಗತಿಸಿ, ವಂದಿಸಿದರು



