ಇತರೆ

ಹುಡುಗಿಯರ ಚಿತ್ರ ಮಾರ್ಫಿಂಗ್ ಮಾಡಿ ಟೆಲಿಗ್ರಾಂನಲ್ಲಿ ಪ್ರಸಾರ: ಕಾಸರಗೋಡಿನಲ್ಲಿ ಎರಡನೇ ಆರೋಪಿ ಬಂಧನ

ಕಾಸರಗೋಡು: ಹುಡುಗಿಯರ ಅರಿವಿಗೆ ಅಥವಾ ಒಪ್ಪಿಗೆಗೆ ಬಾರದ ರೀತಿಯಲ್ಲಿ ಅವರ ಛಾಯಾಚಿತ್ರಗಳನ್ನು ಸಂಗ್ರಹಿಸಿ, ತಂತ್ರಜ್ಞಾನ ಬಳಸಿ ಅಶ್ಲೀಲ ಚಿತ್ರಗಳಾಗಿ ಮಾರ್ಫ್ ಮಾಡಿ ಟೆಲಿಗ್ರಾಂ ಗುಂಪುಗಳ ಮೂಲಕ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಸೈಬರ್ ಕ್ರೈಂ ಪೊಲೀಸರು ಎರಡನೇ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಮಲಪ್ಪುರಂ ಜಿಲ್ಲೆಯ ಪುಲಕ್ಕತ್ತಿರಿ ನಿವಾಸಿ ನಿಕೇತ್ (24) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಈತ ಎರಡನೇ ಆರೋಪಿಯಾಗಿದ್ದಾನೆ. ಪ್ರಕರಣದ ಮೊದಲ ಆರೋಪಿ ಕಾಸರಗೋಡಿನ ಇರಿಯನ್ನಿ ನಿವಾಸಿ ಅನೂಪ್ ಪಿ. ಅವರನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು.

ಪ್ರಕರಣದ ತನಿಖೆ ವೇಳೆ, ಮೊದಲ ಆರೋಪಿ ಒದಗಿಸಿದ್ದ ಹುಡುಗಿಯರ ಛಾಯಾಚಿತ್ರಗಳನ್ನು ನಿಕೇತ್ ಸಂಪಾದಿಸಿ ಅಶ್ಲೀಲ ಚಿತ್ರಗಳಾಗಿ ಪರಿವರ್ತಿಸಿ ಪ್ರಸಾರ ಮಾಡಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ಸೆಪ್ಟೆಂಬರ್ 25ರಂದು ಪುಲಕ್ಕತ್ತಿರಿಯಲ್ಲಿ ನಿಕೇತ್‌ನನ್ನು ಪೊಲೀಸರು ವಶಕ್ಕೆ ಪಡೆದು ಕಾಸರಗೋಡು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಬಳಿಕ ಆತನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಡಿಜಿಟಲ್ ಸಾಧನಗಳು, ಎಲೆಕ್ಟ್ರಾನಿಕ್ ದಾಖಲೆಗಳು ಹಾಗೂ ಟೆಲಿಗ್ರಾಂ ಗುಂಪುಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಹಾಗೂ ಇತರ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಾಜೀವನ್ ಕೆ. ಅವರ ನಿರ್ದೇಶನದಂತೆ ಸಬ್ ಇನ್ಸ್‌ಪೆಕ್ಟರ್ ನೌಶಾದ್ ಟಿ.ಟಿ., ಎಸ್‌ಸಿಪಿಒ ಸುದೀಶ್ ಪಿ.ವಿ., ಎಸ್‌ಸಿಪಿಒ ಸವಾದ್ ಅಶ್ರಫ್ ಹಾಗೂ ಸಿಪಿಒ ವಿಪಿನ್ ಅವರನ್ನೊಳಗೊಂಡ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿತು.