ಹಿರೋಷಿಮಾ: ನಿವೃತ್ತಿ ಜೀವನದತ್ತ ಸಾಗುವ ವಯಸ್ಸಿನಲ್ಲೂ ದೇಹದಾರ್ಢ್ಯ ಕ್ರೀಡೆಯಲ್ಲಿ ಸಾಧನೆ ಮುಂದುವರಿಸಿರುವ ಜಪಾನ್‌ನ 90 ವರ್ಷದ ತೋಶಿಸುಕೆ ಕನಜಾವಾ ಗಮನಾರ್ಹ ಸಾಧನೆ ಮಾಡಿದ್ದಾರೆ.

ಜಪಾನ್ ಮಾಸ್ಟರ್ಸ್ ಬಾಡಿಬಿಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ 85 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ವಿಭಾಗದಲ್ಲಿ ಕನಜಾವಾ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ಅವರು ತಮ್ಮ 19ನೇ ರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವಿಭಾಗದಲ್ಲಿ ಸ್ಪರ್ಧಿಸಿದ್ದ ಇತರ ಏಳು ಸ್ಪರ್ಧಿಗಳನ್ನು ಹಿಂದಿಕ್ಕಿ ಅವರು ಚಾಂಪಿಯನ್ ಆಗಿದ್ದಾರೆ. ವಿಶೇಷವೆಂದರೆ, ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ಒಂದು ದಿನ ಮುನ್ನವೇ ಕನಜಾವಾ ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.
ಹಿರೋಷಿಮಾದಲ್ಲಿ ನೆಲೆಸಿರುವ ಕನಜಾವಾ ಹಲವು ದಶಕಗಳಿಂದ ಫಿಟ್ನೆಸ್ ಮತ್ತು ಬಾಡಿಬಿಲ್ಡಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಸುದೀರ್ಘ ಕ್ರೀಡಾ ಜೀವನದಲ್ಲಿ ವಿಶ್ವದ ಖ್ಯಾತ ಬಾಡಿಬಿಲ್ಡರ್‌ಗಳಾದ ಆರ್ನಾಲ್ಡ್ ಶ್ವಾರ್ಜಿನೆಗ್ಗರ್ ಮತ್ತು ಸೆರ್ಗಿಯೊ ಒಲಿವಾ ಅವರೊಂದಿಗೆ ಒಂದೇ ವೇದಿಕೆಯಲ್ಲಿ ಸ್ಪರ್ಧಿಸಿರುವ ಅನುಭವವೂ ಅವರಿಗೆ ಇದೆ. ವಯಸ್ಸು ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ತೋರಿಸಿರುವ ಕನಜಾವಾ ಅವರ ನಿರಂತರ ಪರಿಶ್ರಮ ಹಾಗೂ ದೇಹದಾರ್ಢ್ಯದ ಮೇಲಿನ ಬದ್ಧತೆ ಇದೀಗ ಮತ್ತೊಮ್ಮೆ ಗಮನ ಸೆಳೆದಿದೆ.



