ಸುಳ್ಯ: ಕಳೆದ 23 ವರ್ಷಗಳಿಂದ ಹಜ್ ಯಾತ್ರಾರ್ಥಿಗಳಿಗೆ ಯಾವುದೇ ಸೇವಾ ಶುಲ್ಕ ಅಥವಾ ಪ್ರತಿಫಲಾಪೇಕ್ಷೆಯಿಲ್ಲದೆ ಉಚಿತ ಸೇವೆ ಸಲ್ಲಿಸುತ್ತಿರುವ ಸುಳ್ಯದ ಬಾಳೆಮಕ್ಕಿ ನಿವಾಸಿ, ಎ.ಆರ್. ಟ್ರೇಡರ್ಸ್ ಮಾಲಕ ಹಸನ್ ಹಾಜಿ ಅವರನ್ನು ಮಂಗಳೂರಿನಲ್ಲಿ ಸನ್ಮಾನಿಸಲಾಯಿತು. ಪ್ರತಿವರ್ಷ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಪಾಸ್ಪೋರ್ಟ್ ಮಾಡಿಸುವುದರಿಂದ ಹಿಡಿದು, ಹಜ್ ಯಾತ್ರೆಯ ಪ್ರಕ್ರಿಯೆ ಆರಂಭವಾದ ದಿನದಿಂದ ತರಬೇತಿ, ವೈದ್ಯಕೀಯ ತಪಾಸಣೆ, ಲಸಿಕೆ, ಲಗೇಜ್ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಕಾಲಕಾಲಕ್ಕೆ ಒದಗಿಸುತ್ತಾ ಹಸನ್ ಹಾಜಿ ಸೇವೆ ಸಲ್ಲಿಸುತ್ತಿದ್ದಾರೆ.
ಹಜ್ ಯಾತ್ರಾರ್ಥಿಗಳಿಗೆ ಸುದೀರ್ಘ ಅವಧಿಯಿಂದ ಸಲ್ಲಿಸುತ್ತಿರುವ ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ, ಮಂಗಳೂರಿನ ಮುಡಿಪು ಎಜುಪಾರ್ಕ್ನಲ್ಲಿ ಜಿಲ್ಲೆಯ ಹಜ್ ಸೇವಕರಿಗಾಗಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನಕ್ಕೆ ಆಯ್ಕೆಯಾದ ಏಕೈಕ ವ್ಯಕ್ತಿಯಾಗಿ ಹಸನ್ ಹಾಜಿ ಗೌರವಿಸಲ್ಪಟ್ಟರು.
ಮಂಗಳೂರು ಹಜ್ ನಿರ್ವಹಣಾ ಸಮಿತಿ ಹಾಗೂ ಹಜ್ ಕಮಿಟಿ ಸದಸ್ಯರ ವತಿಯಿಂದ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಹಜ್ ಯಾತ್ರೆಯ ಸಂದರ್ಭದಲ್ಲಿ ಹಜ್ ನಿರ್ವಹಣಾ ಸಮಿತಿಯಲ್ಲಿಯೂ ಕಾರ್ಯನಿರ್ವಹಿಸುವ ಹಸನ್ ಹಾಜಿ, ಹಜ್ ಕ್ಯಾಂಪ್ನಲ್ಲೂ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವುದು ಗಮನಾರ್ಹವಾಗಿದೆ.ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಅಸ್ಸಯ್ಯದ್ ಅಶ್ರಫ್ ತಂಙಳ್ ಆದೂರು ಹಾಗೂ ಹಜ್ ನಿರ್ವಹಣಾ ಸಮಿತಿ ಅಧ್ಯಕ್ಷ, ಯೇನೆಪೋಯ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಯೇನೆಪೋಯ ಅಬ್ದುಲ್ಲ ಕುಂಞ ಅವರು ಹಸನ್ ಹಾಜಿ ಅವರನ್ನು ಸನ್ಮಾನಿಸಿದರು.



