₹26 ಲಕ್ಷದವರೆಗೆ ಏಲಂ ಆಗುತ್ತಿದ್ದ ಮಾರುಕಟ್ಟೆ ₹9 ಲಕ್ಷಕ್ಕೂ ಇಳಿಕೆ; ಜಿಲ್ಲಾಧಿಕಾರಿ ಆದೇಶದ ನಿರೀಕ್ಷೆಯಲ್ಲಿ ವ್ಯಾಪಾರಿ
ಸುಳ್ಯ: ಒಂದೊಮ್ಮೆ ಗ್ರಾಹಕರ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಸುಳ್ಯ ನಗರದ ಸೆಂಟ್ರಲ್ ಮೀನು ಮಾರುಕಟ್ಟೆ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದ್ದು, ಇದೀಗ ಮೌನಕ್ಕೆ ಶರಣಾಗಿದೆ. ವ್ಯಾಪಾರಿಗಳ ಕೂಗು, ಗ್ರಾಹಕರ ಚೌಕಾಸಿ ಹಾಗೂ ಮೀನು ಮಾರಾಟದ ಗಿಜಿಗುಡಾಟದಿಂದ ತುಂಬಿರುತ್ತಿದ್ದ ಮಾರುಕಟ್ಟೆಯಲ್ಲಿ ಇದೀಗ ನೀರವತೆ ಆವರಿಸಿದೆ.
ಸುಳ್ಯ ನಗರದ ಪ್ರಮುಖ ಮೀನು ವ್ಯಾಪಾರದ ಕೇಂದ್ರವಾಗಿದ್ದ ಈ ಮಾರುಕಟ್ಟೆ, ಒಂದು ಕಾಲದಲ್ಲಿ ವ್ಯಾಪಾರಿಗಳಿಗೆ ಉತ್ತಮ ಆದಾಯದ ಮೂಲವಾಗಿತ್ತು. ಅಲ್ಲದೆ, ನಗರ ಪಂಚಾಯತ್‌ಗೂ ಗಣನೀಯ ಆದಾಯ ತಂದುಕೊಡುತ್ತಿತ್ತು. ಒಂದು ಹಂತದಲ್ಲಿ ಮಾರುಕಟ್ಟೆಯ ಏಲಂ ಮೊತ್ತ ವರ್ಷಕ್ಕೆ ಸುಮಾರು ₹26 ಲಕ್ಷದವರೆಗೆ ತಲುಪಿತ್ತು.
ಆದರೆ ನಗರದ ಅಂಚಿನ ಪ್ರದೇಶಗಳಲ್ಲಿ ಹಾಗೂ ಗ್ರಾಮಗಳ ಗಡಿಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮೀನು ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ ಬಳಿಕ ಪ್ರಮುಖ ಮೀನು ವ್ಯಾಪಾರಿಗಳು ಆ ಭಾಗಗಳತ್ತ ಮುಖ ಮಾಡಿದರು. ಇದರಿಂದ ಸೆಂಟ್ರಲ್ ಮೀನು ಮಾರುಕಟ್ಟೆಯ ವ್ಯಾಪಾರ ಕ್ರಮೇಣ ಕುಸಿಯತೊಡಗಿತು.
‘ಈ ಮಾರುಕಟ್ಟೆಯೇ ನನಗೆ ಭವಿಷ್ಯ ನೀಡಿದೆ’
ಈ ಕುರಿತು ಮಾರುಕಟ್ಟೆಯಲ್ಲಿ ಕೆಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಯೋರ್ವರು ಮಾತನಾಡಿ, “ಈ ಮಾರುಕಟ್ಟೆಯೇ ನನಗೆ ಮೀನು ವ್ಯಾಪಾರದ ಮೂಲಕ ಉಜ್ವಲ ಭವಿಷ್ಯ ನೀಡಿದೆ. ಕೇವಲ ವ್ಯಾಪಾರ ಕಡಿಮೆಯಾಗಿದೆ ಎಂಬ ಕಾರಣಕ್ಕೆ ನಾನು ವ್ಯಾಪಾರ ಕೈಬಿಟ್ಟರೆ ಅದು ನನ್ನ ಆತ್ಮಸಾಕ್ಷಿಗೆ ಒಪ್ಪುವುದಿಲ್ಲ. ಸಣ್ಣಪುಟ್ಟ ನಷ್ಟಗಳಾದರೂ ಸಹಿಸಿಕೊಂಡು ಮುಂದುವರಿಯಬೇಕು ಎಂಬ ಉದ್ದೇಶದಿಂದಲೇ ಇಷ್ಟು ದಿನ ವ್ಯಾಪಾರ ನಡೆಸಿದ್ದೇನೆ,” ಎಂದರು. ಆದರೆ ಕ್ರಮೇಣ ವ್ಯಾಪಾರ ಕುಸಿಯುತ್ತಾ ಬಂದ ಪರಿಣಾಮ ಏಲಂಗೆ ಒಪ್ಪಿಕೊಂಡಿದ್ದ ಮೊತ್ತವನ್ನು ಪಾವತಿಸುವುದೇ ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಯಿತು. ವರ್ಷಕ್ಕೆ ₹26 ಲಕ್ಷದವರೆಗೆ ಏಲಂ ಆಗುತ್ತಿದ್ದ ಮಾರುಕಟ್ಟೆ, ಬಳಿಕ ₹17 ಲಕ್ಷ, ನಂತರ ₹15 ಲಕ್ಷದ ಮಟ್ಟಕ್ಕೆ ಇಳಿಯಿತು. ವ್ಯಾಪಾರ ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ ಈ ಮೊತ್ತವನ್ನು ಪಾವತಿಸುವುದು ಅಸಾಧ್ಯವಾಗತೊಡಗಿತು.
ಈ ಹಿನ್ನೆಲೆಯಲ್ಲಿ ಏಲಂ ಮೊತ್ತವನ್ನು ಮತ್ತಷ್ಟು ಕಡಿಮೆ ಮಾಡುವಂತೆ ವ್ಯಾಪಾರಿಗಳು ಮನವಿ ಮಾಡಿದರು. ಆದರೆ ನಿಯಮಾನುಸಾರ ₹15 ಲಕ್ಷಕ್ಕಿಂತ ಕಡಿಮೆ ಮೊತ್ತಕ್ಕೆ ಮಾರುಕಟ್ಟೆಯನ್ನು ಏಲಂ ಮಾಡಲು ಅವಕಾಶವಿಲ್ಲ ಎಂಬ ಕಾರಣ ಎದುರಾಯಿತು. ಹೀಗಾಗಿ ಮತ್ತೊಮ್ಮೆ ಏಲಂ ಪ್ರಕ್ರಿಯೆ ನಡೆಸಲಾಯಿತು. ₹15 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಬಾರದಿದ್ದರೆ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳ ಆದೇಶ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅಲ್ಲಿಯವರೆಗೆ ಮಾರುಕಟ್ಟೆಯನ್ನು ಬಂದ್ ಮಾಡಿಡುವುದು ಅನಿವಾರ್ಯವಾಯಿತು.
₹9 ಲಕ್ಷಕ್ಕೂ ಬಿಡ್ ಸಿಗದ ಸ್ಥಿತಿ
ನಂತರ ಮತ್ತೊಮ್ಮೆ ಏಲಂ ನಡೆಸಲಾಗಿದ್ದು, ಈ ಬಾರಿ ₹9 ಲಕ್ಷದಿಂದ ಏಲಂ ಪ್ರಕ್ರಿಯೆ ಆರಂಭಿಸಲಾಯಿತು. ಆದರೆ ₹9 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಲು ಯಾರೂ ಮುಂದೆ ಬರಲಿಲ್ಲ. ಪರಿಣಾಮವಾಗಿ ವಿಷಯ ಇದೀಗ ಜಿಲ್ಲಾಧಿಕಾರಿಗಳ ಆದೇಶದ ಹಂತಕ್ಕೆ ತಲುಪಿದೆ. ಹೊಸದಾಗಿ ₹9 ಲಕ್ಷಕ್ಕೆ ಏಲಂನಲ್ಲಿ ಭಾಗವಹಿಸಿರುವ ವ್ಯಾಪಾರಿಯೂ ಜಿಲ್ಲಾಧಿಕಾರಿಗಳ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಒಟ್ಟಾರೆ, ಒಮ್ಮೆ ₹26 ಲಕ್ಷದವರೆಗೆ ಏಲಂ ಆಗುತ್ತಿದ್ದ ಸೆಂಟ್ರಲ್ ಮೀನು ಮಾರುಕಟ್ಟೆ ಇದೀಗ ₹9 ಲಕ್ಷದ ಹಂತಕ್ಕೂ ಮೀರಿ ಬಿಡ್ ಬಾರದ ಸ್ಥಿತಿಗೆ ತಲುಪಿರುವುದು ಮಾರುಕಟ್ಟೆಯ ವ್ಯಾಪಾರದ ಕುಸಿತಕ್ಕೆ ಹಿಡಿದ ಕನ್ನಡಿಯಂತಾಗಿದೆ. ಆರು ತಿಂಗಳಿಂದ ಸೆಂಟ್ರಲ್ ಮೀನು ಮಾರುಕಟ್ಟೆ ಸ್ಥಗಿತಗೊಂಡಿದ್ದು, ಮತ್ತೆ ವ್ಯಾಪಾರದ ಸದ್ದು ಕೇಳಿಬರಲು ಜಿಲ್ಲಾಧಿಕಾರಿಗಳ ಆದೇಶದ ನಿರೀಕ್ಷೆಯಲ್ಲಿದೆ.