ನವದೆಹಲಿ, ಅ.11: ದೆಹಲಿಯ ಡಿಡಿಯು ಮಾರ್ಗದಲ್ಲಿ ಅಕ್ಟೋಬರ್ 10ರಂದು ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ನಾಲ್ವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ರಮಣ್ ಸೈನಿ (50), ವಿವೇಕಾನಂದ ಅಲಿಯಾಸ್ ವಿವೇಕ್ (32), ಕಪಿಲ್ ಕುಮಾರ್ (27) ಹಾಗೂ ರವೀಂದರ್ ಸಿಂಗ್ ಅಲಿಯಾಸ್ ಗೋವಿಂದ್ ಹಿಂದೂ (35) ಎಂದು ಗುರುತಿಸಲಾಗಿದೆ. ಇವರು ಹಿಂದೂ ರಕ್ಷಾ ದಳದ ಸದಸ್ಯರೆಂದು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳನ್ನು ತಳ್ಳಾಡಿಸಿ ಹಲ್ಲೆ ನಡೆಸುವುದು ಹಾಗೂ ಮಹಿಳೆಯರ ಮೇಲೂ ದೈಹಿಕ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ವಿಡಿಯೋ ಪರಿಶೀಲನೆಯ ಬಳಿಕ ಘಟನೆ ಕಮಲಾ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಡಿಡಿಯು ಮಾರ್ಗದಲ್ಲಿ ನಡೆದಿರುವುದು ದೃಢಪಟ್ಟಿದೆ.
ಯಾವುದೇ ಅಧಿಕೃತ ದೂರು ದಾಖಲಾಗದಿದ್ದರೂ, ವೈರಲ್ ವಿಡಿಯೋ ಆಧರಿಸಿ ಪೊಲೀಸರು ಸ್ವಯಂಪ್ರೇರಿತವಾಗಿ ಕ್ರಮ ಕೈಗೊಂಡು ನಾಲ್ವರನ್ನು ಬಂಧಿಸಿದ್ದಾರೆ. ಘಟನೆ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.