Featured, ಇತರೆ

ಸಕ್ರಿಯ ಸಿಮ್ ಕಾರ್ಡ್ ಇಲ್ಲದೆ ವಾಟ್ಸಾಪ್, ಟೆಲಿಗ್ರಾಮ್ ಬಳಕೆಗೆ ನಿರ್ಬಂಧ: 2027ರ ಜನವರಿ 1ರಿಂದ ಹೊಸ ನಿಯಮ ಜಾರಿಗೆ..!!?

ಹೊಸ ವ್ಯವಸ್ಥೆಯ ಪ್ರಕಾರ, ವಾಟ್ಸಾಪ್ ಮತ್ತು ಟೆಲಿಗ್ರಾಮ್ ಖಾತೆಗಳನ್ನು ನೋಂದಾಯಿತ ಮೊಬೈಲ್ ಸಂಖ್ಯೆಯ ಸಕ್ರಿಯ ಸಿಮ್ ಕಾರ್ಡ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಿಸುವುದು ಕಡ್ಡಾಯವಾಗಲಿದೆ. 

ನವದೆಹಲಿ: ಆನ್‌ಲೈನ್ ವಂಚನೆ ಹಾಗೂ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ವಾಟ್ಸಾಪ್, ಟೆಲಿಗ್ರಾಮ್ ಸೇರಿದಂತೆ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳ ಬಳಕೆಗೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂಬಂಧಿಸಿದ ಸಕ್ರಿಯ ಸಿಮ್ ಕಾರ್ಡ್ ಸಾಧನದಲ್ಲಿ ಇಲ್ಲದಿದ್ದರೆ ಅಂತಹ ಅಪ್ಲಿಕೇಶನ್‌ಗಳ ಬಳಕೆಯನ್ನು ನಿರ್ಬಂಧಿಸುವ ‘ಸಿಮ್ ಬೈಂಡಿಂಗ್’ (SIM Binding) ವ್ಯವಸ್ಥೆಯನ್ನು 2027ರ ಜನವರಿ 1ರಿಂದ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.

ಕೇಂದ್ರ ದೂರಸಂಪರ್ಕ ಇಲಾಖೆಯು (DoT) ಈ ಸಂಬಂಧ ಮೆಸೇಜಿಂಗ್ ಅಪ್ಲಿಕೇಶನ್‌ಗಳ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡಿದ್ದು, 2026ರ ಡಿಸೆಂಬರ್ 31ರೊಳಗೆ ಹೊಸ ನಿಯಮಗಳಿಗೆ ಅನುಗುಣವಾಗಿ ತಾಂತ್ರಿಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದೆ.

ಹೊಸ ವ್ಯವಸ್ಥೆಯ ಪ್ರಕಾರ, ವಾಟ್ಸಾಪ್ ಮತ್ತು ಟೆಲಿಗ್ರಾಮ್ ಖಾತೆಗಳನ್ನು ನೋಂದಾಯಿತ ಮೊಬೈಲ್ ಸಂಖ್ಯೆಯ ಸಕ್ರಿಯ ಸಿಮ್ ಕಾರ್ಡ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಿಸುವುದು ಕಡ್ಡಾಯವಾಗಲಿದೆ. ಮೊಬೈಲ್ ಫೋನ್‌ನಿಂದ ಸಂಬಂಧಿತ ಸಿಮ್ ಕಾರ್ಡ್ ತೆಗೆದುಹಾಕಿದರೆ, ಬದಲಾಯಿಸಿದರೆ ಅಥವಾ ನಿಷ್ಕ್ರಿಯಗೊಂಡರೆ ಸಂಬಂಧಿತ ಅಪ್ಲಿಕೇಶನ್‌ಗಳ ಸೇವೆಗೆ ನಿರ್ಬಂಧ ಎದುರಾಗಬಹುದು.

ಪ್ರಸ್ತುತ ಕೆಲವು ಮೆಸೇಜಿಂಗ್ ಅಪ್ಲಿಕೇಶನ್‌ಗಳನ್ನು ನೋಂದಾಯಿತ ಸಿಮ್ ಕಾರ್ಡ್ ಇಲ್ಲದ ಸಾಧನಗಳಲ್ಲಿಯೂ ವೈ-ಫೈ ಸಂಪರ್ಕದ ಮೂಲಕ ಬಳಸಲು ಅವಕಾಶವಿದೆ. ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು ನಕಲಿ ಖಾತೆಗಳು, ಆನ್‌ಲೈನ್ ವಂಚನೆ, ವ್ಯಕ್ತಿಗಳ ಸೋಗಿನಲ್ಲಿ ಸಂದೇಶ ರವಾನೆ ಹಾಗೂ ಇತರ ಸೈಬರ್ ಅಪರಾಧಗಳನ್ನು ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ವಿಶೇಷವಾಗಿ ವಿದೇಶಗಳಿಂದ ಭಾರತೀಯ ಮೊಬೈಲ್ ಸಂಖ್ಯೆಗಳನ್ನು ದುರುಪಯೋಗಪಡಿಸಿಕೊಂಡು ನಡೆಯುತ್ತಿರುವ ಸೈಬರ್ ವಂಚನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.

ಹೊಸ ನಿಯಮದ ಅನುಷ್ಠಾನದಿಂದ ಮೆಸೇಜಿಂಗ್ ಖಾತೆಗಳು ನೋಂದಾಯಿತ ಸಿಮ್ ಕಾರ್ಡ್‌ಗಳೊಂದಿಗೆ ಸಂಪರ್ಕ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ. ಇದರಿಂದ ಡಿಜಿಟಲ್ ವಂಚನೆಗಳನ್ನು ನಿಯಂತ್ರಿಸುವುದರ ಜೊತೆಗೆ ಬಳಕೆದಾರರ ಖಾತೆಗಳ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಬಹುದು ಎಂಬುದು ಸರ್ಕಾರದ ಉದ್ದೇಶವಾಗಿದೆ.

ಈ ನಿಯಮವು ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮಾತ್ರವಲ್ಲದೆ ಸಿಗ್ನಲ್ ಸೇರಿದಂತೆ ಇತರ ಹಲವು ಮೆಸೇಜಿಂಗ್ ಸೇವೆಗಳಿಗೂ ಅನ್ವಯಿಸಲಿದೆ. ಹೊಸ ವ್ಯವಸ್ಥೆಯ ಅನುಷ್ಠಾನದಿಂದ ಸಿಮ್ ಕಾರ್ಡ್ ಇಲ್ಲದೆ ಅಪ್ಲಿಕೇಶನ್ ಬಳಸುವವರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಬಳಕೆದಾರರು ತಮ್ಮ ಖಾತೆಗೆ ಸಂಬಂಧಿಸಿದ ಸಿಮ್ ಕಾರ್ಡ್ ಸಕ್ರಿಯವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.