Featured, ಇತರೆ

ಕಾಸರಗೋಡು: ಕಾರು–ಬೈಕ್ ಡಿಕ್ಕಿ; ಗಂಭೀರವಾಗಿ ಗಾಯಗೊಂಡಿದ್ದ 20ರ ಹರೆಯದ ಯುವಕ ಸಾವು

ಕಾಸರಗೋಡು, ನ. 23: ಚೆಂಗಳದ ನಾಲ್ಕನೇ ಮೈಲಿ ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 20 ವರ್ಷದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಮೃತನನ್ನು ಕಳನಾಡಿನ ವಳ್ಳಿಯೋಡ್ ನಿವಾಸಿ ಅಶ್ರಫ್ ಮಯ್ಯ ಅವರ ಪುತ್ರ ಆದಿಲ್ ಅಹ್ಮದ್ (20) ಎಂದು ಗುರುತಿಸಲಾಗಿದೆ. ಬೈಕ್‌ನ ಹಿಂಬದಿ ಸವಾರನಾಗಿದ್ದ ಬೀಜಂತಡುಕ್ಕದ ಬಿ. ಮೊಹಮ್ಮದ್ ಆದಿಲ್ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಕಳೆದ ಶುಕ್ರವಾರ ಚೆಂಗಳದ ನಾಲ್ಕನೇ ಮೈಲಿಯಲ್ಲಿರುವ ಹಳೆಯ ಕಾರುಗಳ ಶೋರೂಂ ಸಮೀಪದ ಸರ್ವಿಸ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿತ್ತು.

ಮಾಹಿತಿಯ ಪ್ರಕಾರ, ಬೈಕ್ ನಾಲ್ಕನೇ ಮೈಲಿಯಿಂದ ಚೆಂಗಳದ ಕಡೆಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಕಾರು ಯಾವುದೇ ಸೂಚನೆ ನೀಡದೆ ಏಕಾಏಕಿ ಬಲಕ್ಕೆ ತಿರುಗಿದೆ. ಈ ವೇಳೆ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆದಿಲ್ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಈ ಸಂಬಂಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.