ಬೆಂಗಳೂರು, ಮೇ 24: ನೈಋತ್ಯ ಮಾನ್ಸೂನ್ ಪ್ರಾರಂಭದ ಹೊತ್ತಿನಲ್ಲಿ ಕರ್ನಾಟಕದ ಹವಾಮಾನದಲ್ಲಿ ತೀವ್ರ ಬದಲಾವಣೆಗಳು ಕಾಣಿಸಿಕೊಂಡಿದ್ದು, ಮುಂದಿನ ಐದು ದಿನಗಳವರೆಗೆ ರಾಜ್ಯದ ಬಹುಮಟ್ಟಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ಅತೀ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪೂರ್ವ ಅರಬ್ಬಿ ಸಮುದ್ರದ ಗೋವಾ ಹಾಗೂ ಕೊಂಕಣ ಕರಾವಳಿ ಸಮೀಪದಲ್ಲಿ ವಾಯುಭಾರ ಕುಸಿತದ ಪ್ರಭಾವ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಸಮುದ್ರ ಮೇಲ್ಮೈಯಿಂದ 5.8 ಕಿಲೋಮೀಟರ್ ಎತ್ತರದವರೆಗೆ ಚಂಡಮಾರುತದ ಪ್ರಸರಣವೂ ಇದೆ. ಈ ಹವಾಮಾನ ವೈಪರಿತ್ಯ ಉತ್ತರಕ್ಕೆ ಚಲಿಸುವ ಸಂಭವವಿದ್ದು, ಇದರ ಪರಿಣಾಮವಾಗಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಮೇ 28ರವರೆಗೆ ಮಳೆ ಮುಂದುವರಿಯಲಿದೆ.
ಪ್ರಮುಖ ಮಳೆಯಾದ ಸ್ಥಳಗಳು: ಇಂದು ಅತ್ಯಧಿಕ ಮಳೆ ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್‌ನಲ್ಲಿ 160 ಮಿಲಿಮೀಟರ್ ದಾಖಲಾಗಿದೆ. ಕೊಡಗಿನ ಬಾಗಮಂಡಲದಲ್ಲಿ 100 ಮಿ.ಮೀ ಹಾಗೂ ಲೋಂಡಾದಲ್ಲಿ 60 ಮಿ.ಮೀ ಮಳೆಯಾಗಿದೆ. ಈ ಮಟ್ಟಕ್ಕಿಂತಲೂ ಹೆಚ್ಚಾದ ಮಳೆಯ ಮುನ್ಸೂಚನೆ ಮುಂದಿನ ದಿನಗಳಲ್ಲಿ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ವಿಜ್ಞಾನಿ ಡಾ. ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ರೆಡ್ ಅಲರ್ಟ್ ಘೋಷಿತ ಜಿಲ್ಲೆಗಳು: ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ – ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರೀ ಮತ್ತು ಅತೀ ಭಾರೀ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮೇ 27ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಗುಡುಗು ಮತ್ತು ಮಿಂಚಿನ ಸಂಭವವೂ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ.
ಹವಾಮಾನ ಇಲಾಖೆ ಸೂಚಿಸಿದ ಮುನ್ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಮತ್ತು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಸೂಚಿಸಲಾಗಿದೆ.





m
