ಇವರಿಗೆಲ್ಲಾ ಏನಾಗಿದೆ ಎಂದು ಅರ್ಥವಾಗುತ್ತಿಲ್ಲ! ಕೊಂದವನಿಗೆ ಗೊತ್ತಿಲ್ಲ ನಾನು ಯಾರನ್ನು ಕೊಲ್ಲುತ್ತಿದ್ದೇನೆ ಎಂದು! ಕೊಲ್ಲಲ್ಪಟ್ಟವನಿಗೆ ಗೊತ್ತೇ ಇಲ್ಲ ನಾನೇಕೆ ಕೊಲ್ಲಲ್ಪಟ್ಟೆ ಎಂಬುವುದು!! ಧರ್ಮಾಂಧತೆಯ ವಿಷಕಾರಿ ಹೋದ ಜಂತುಗಳು ತೆರೆಮರೆಯಲ್ಲಿ ಕೂತು ಚೆಂದ ನೋಡುತ್ತಿದೆ. ಕೆಟ್ಟ ನಾಲಿಗೆಯ ಉಗ್ರ ಭಾಷಣ ಕೇಳಿ ಧರ್ಮಾಂಧತೆಯ ಮದವೇರಿದ ಮುಠ್ಠಾಳರು ಕೊನೆಗೆ ಸಿಕ್ಕ ಸಿಕ್ಕ ಅಮಾಯಕರನ್ನು ನಿಷ್ಠೂರವಾಗಿ ಕೊಚ್ಚಿ ಕೊಂದು ಹಾಕಿ ಕೊನೆಗೊಂದು ದಿನ ತಾವೂ ಕೂಡ ಬೀದಿ ಹೆಣವಾಗಿ ಹೋಗುತ್ತಾರೆ!
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಾಕತ್ತಿಲ್ಲದ ಸರಕಾರಗಳು, ತಮ್ಮ ಸ್ವಾರ್ಥಕ್ಕಾಗಿ ಬಡ ಯುವಕರನ್ನು ಛೂಬಿಡುವ ನರ ರಾಕ್ಷಸರು, ತಮ್ಮ ಭವಿಷ್ಯದ ಬಗ್ಗೆ ಎಳ್ಳಷ್ಟೂ ಚಿಂತಿಸದೆ ಮುಗ್ಧ ಮನುಷ್ಯರನ್ನು ಕೊಂದು ಹಾಕುವ ಬುದ್ಧಿ ಶೂನ್ಯರು. ಇವರೆಲ್ಲರೂ ಸೇರಿ ನಮ್ಮ ಸುಂದರ ಕರಾವಳಿಯ ಮಾನ ಮರ್ಯಾದೆ ಹರಾಜು ಮಾಡಿಬಿಟ್ಟಿದ್ದಾರೆ!
ಕಷ್ಟಪಟ್ಟು ದುಡಿದು ಕುಟುಂಬದ ಜೊತೆ ನೆಮ್ಮದಿಯಿಂದ ಬಾಳಿ ಬದುಕಿ, ಅಕ್ಕಪಕ್ಕದವರಿಗೆ ಸಾಧ್ಯವಾದಷ್ಟು ಸಹಾಯ ಸಹಕಾರ ಮಾಡಿ ಇರುವಷ್ಟು ದಿನ ಖುಷಿ ಖುಷಿಯಾಗಿ ಇದ್ದು ಕೊನೆಗೊಂದು ದಿನ ಊರ ಜನರೆಲ್ಲರೂ ಒಳ್ಳೆಯದನ್ನು ಮಾತ್ರ ಹೇಳುವ ರೀತಿಯಲ್ಲಿ ಕಣ್ಣು ಮುಚ್ಚಬೇಕಾದ ನಾವು ಯಾರದೋ ನಾಚಿಕೆಗೆಟ್ಟವರ ಮಾತು ಕೇಳಿ ನಮ್ಮ ಹಾಗೂ ನಮ್ಮವರ ಬದುಕನ್ನು ಬರ್ಬರಗೊಳಿಸುತ್ತಿರುವುದು ದುರಂತ!
ನಾವು ಮನುಷ್ಯರು. ಮೃಗಗಳಿಗೆ ಇಲ್ಲದ ಬುದ್ಧಿ ಸೃಷ್ಟಿಕರ್ತ ನಮಗೆ ನೀಡಿದ್ದಾನೆ. ಧರ್ಮಾಂಧತೆಯ ಅಮಲಿನಲ್ಲಿ ಆ ಬುದ್ಧಿಯನ್ನು ಸಮಯಸಾಧಕ ರಾಜಕಾರಣಿಗಳ ಪಾದದಡಿಗೆ ಅಡವಿಟ್ಟು ಬಿಟ್ಟರೆ ನೀನು ಮನುಷ್ಯ ಕುಲಕ್ಕೆ ನಾಲಾಯಕ್ಕು!!
ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ(ರಾಜ್ಯಾಧ್ಯಕ್ಷರು: ಎಸ್ಸೆಸ್ಸೆಫ್ ಕರ್ನಾಟಕ)