ಬಾರೆಬೆಟ್ಟು:ನಮ್ಮ ಊರಿನ ಯುವತಲೆಮಾರಿಗೆ ಪ್ರೇರಣೆಯಾಗಿದ್ದ ಹಸನ್ಮುಖಿ, ಸೌಮ್ಯಸ್ವಭಾವದ ಸುಲೈಮಾನ್ ಕುಲ್ಯಾರ್ ಅವರು ಯಾವುದೇ ಮುನ್ಸೂಚನೆಯಿಲ್ಲದೇ ಇಹಲೋಕ ತ್ಯಜಿಸಿದ ಸುದ್ದಿ ಎಲ್ಲರಲ್ಲೂ ಆಘಾತ ತಂದಿದೆ.
ಸರ್ವರೊಂದಿಗೆ ಸದಾ ಮಂದಹಾಸದಿಂದ ನಡೆದುಬರುವ, ಸೌಹಾರ್ದತೆ ಹಾಗೂ ಶಾಂತಿಯನ್ನೇ ಮೌಲ್ಯಮಾಡಿಕೊಂಡು ಬದುಕಿದ ವ್ಯಕ್ತಿಯಾಗಿದ್ದರು. ಯಾರಾದರೂ ಕೋಪದಿಂದ ಮಾತನಾಡಿದರೂ, ತಾನಾಗಿ ಹತ್ತಿರ ಬಂದು ನಗುನಗುತ್ತಾ ಮೆಲ್ಲಗೆ ಮಾತನಾಡುವ ಅವರ ಗುಣವೈಶಿಷ್ಟ್ಯ ಎಲ್ಲರ ಮನಸ್ಸಿನಲ್ಲಿ ತಾಜಾ ನೆನಪಾಗಿಯೇ ಉಳಿದಿದೆ.
ಅವರು ಜೀವಿತಾವಧಿಯ ಕೊನೆಯ ದಿನವರೆಗೆ ತಮ್ಮ ಉದ್ಯೋಗದಲ್ಲಿ ನಿರತರಾಗಿದ್ದರು. ಯಾವತ್ತೂ ಅತಿರೇಕವಿಲ್ಲದೆ, ತಾತ್ವಿಕ ಚಿಂತನೆ ಮತ್ತು ಶಿಸ್ತುಪೂರ್ವಕ ಬದುಕನ್ನು ನಡಿಸಿಕೊಂಡು ಬಂದಿದ್ದ ಅವರು, ನಮಾಜ್ಗಾಗಿ ಪ್ರತಿದಿನವೂ ಐದು ಹೊತ್ತು ಸಮೀಪದ ಮಸೀದಿಗೆ ತೆರಳುವ ಅಪರೂಪದ ಶ್ರದ್ಧಾವಂತರಲ್ಲಿ ಒಬ್ಬರಾಗಿದ್ದರು.
ಸುಮಾರು 28–30 ವರ್ಷಗಳ ಹಿಂದೆ ಹಿದಾಯತುಲ್ ಇಸ್ಲಾಂ ದಫ್ ಕಮಿಟಿಯ ರಚನೆ ಮೂಲಕ ಯುವಜನರನ್ನು ಇಸ್ಲಾಮಿಕ್ ಸಾಂಸ್ಕೃತಿಕ ಚಟುವಟಿಕೆಗಳತ್ತ ಸೆಳೆಯುವ ಮಹತ್ವದ ಕಾರ್ಯವನ್ನು ಆರಂಭಿಸಿದ್ದರು. ಅವರು ದಫ್ ಕಮಿಟಿಗೆ ನೇತ್ರತ್ವ ನೀಡುವುದರೊಂದಿಗೆ, ಹೊಸ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮಾದರಿ ವ್ಯವಸ್ಥೆಯನ್ನು ರೂಪಿಸಿದ್ದರು. ತಮ್ಮ ಮನೆಯ ಎದುರು ಭಾಗದಲ್ಲಿ ಕಮಿಟಿಗೆ ಕಟ್ಟಡ ನಿರ್ಮಿಸಲು ಅವಕಾಶ ನೀಡಿ, ಅದರ ಮೂಲಕ ಸಮಾಜಕ್ಕೆ ಶಾಶ್ವತ ಕೊಡುಗೆ ನೀಡಿದ್ದರು. ಇಂದು SSF ಹಾಗೂ SYS ಸಂಘಟನೆಗಳ ಕಾರ್ಯಕ್ರಮಗಳು ಅಲ್ಲಿಯೇ ನಡೆಯುತ್ತಿವೆ.
ಸುನ್ನತ್ ಜಮಾಅತ್ನ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದ ಅವರು, ಮುಹ್ಯದ್ದೀನ್ ಜುಮಾ ಮಸ್ಜಿದ್ ಬಾರೆಬೆಟ್ಟು ಸಮಿತಿಯ ಸದಸ್ಯರಾಗಿದ್ದರು ಮತ್ತು ಇತರ ಪ್ರಮುಖ ಹೊಣೆಗಾರಿಕೆಗಳನ್ನು ಕೂಡ ನಿಭಾಯಿಸಿದ್ದರು. ಉಸ್ತಾದರುಗಳ ಬಗ್ಗೆ ಅಪಾರ ಗೌರವವನ್ನು ಪೋಷಿಸುತ್ತಿದ್ದ ಅವರು, ಸಮೀಪದ ಉಸ್ತಾದರು ಮತ್ತು ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು.
SYS ನಲ್ಲೂ ಸಕ್ರಿಯರಾಗಿ ಬಳಿಕ ಕರ್ನಾಟಕ ಮುಸ್ಲಿಂ ಜಮಾಅತ್ನ ಮೀಡಿಯಾ ವಿಂಗ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಪವಿತ್ರ ಮುಹರ್ರಮ್ ತಿಂಗಳ 7ನೇ ದಿನ ಗುರುವಾರದಂದು, ಎಂದಿನಂತೆ ವುಳೂ ಮಾಡಿ ಮಸೀದಿಗೆ ತೆರಳಲು ಹೊರಟಿದ್ದರು. ಆದರೆ ಮಸೀದಿಗೆ ತಲುಪದೆಯೆ ಅವರು ಮನೆಯಲ್ಲಿಯೇ ಇಹಲೋಕ ತ್ಯಜಿಸಿದರು.
ಅನುಸ್ಮರಣೆ ಹಾಗೂ ದಿಕ್ರ್ ಮಜ್ಲಿಸ್
ಅವರ ದೀನಿ ಪ್ರೀತಿಗೆ ಸಾಕ್ಷಿಯಾಗಿ, ನೂರಾರು ಕಾರ್ಯಕರ್ತರು, ಮುಖಂಡರು KMJ, SYS, SSF ಹಾಗೂ ಹಿದಾಯತುಲ್ ಇಸ್ಲಾಂ ದಫ್ ಕಮಿಟಿಯಿಂದ ನಡೆಸಿದ ದಿಕ್ರ್ ಮಜ್ಲಿಸಿನಲ್ಲಿ ಭಾಗವಹಿಸಿದರು. ಹಲವಾರು ಸಯ್ಯದರುಗಳು, ಉಲಮಾ, ಉಮರಾ ನೇತಾರರು ಅವರುಗಾಗಿಯೆ ಪ್ರಾರ್ಥಿಸಿದರು. ಅಹ್ಲ್ ಬೈತ್ನ ಕಣ್ಮಣಿ ಸಯ್ಯದ್ ಮದಕ ತಂಗಳ್ ಪವಿತ್ರ ಮದೀನಾ ಮಣ್ಣಿನಿಂದ ವಿಶೇಷ ದುವಾ ಸಲ್ಲಿಸಿದರು.
ಪ್ರಾರ್ಥನೆಗಳು
ಅವರು ನಮ್ಮೆಲ್ಲರ ಜೀವನದಲ್ಲಿ ನಿಭಾಯಿಸಿದ ಪಾತ್ರ ಅಪಾರ. ವೈಯುಕ್ತಿಕವಾಗಿ ಕೂಡ, ಹಲವಾರು ವರ್ಷಗಳ ಹಿಂದೆ ನಮ್ಮ ಕುಟುಂಬವು ಅವರ ಸಮೀಪವಿರುವ ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದಾಗ, ಅವರಿಗೆ ಮನೆಗೆ ಬೆಳಕು ನೀಡಿದ ಭಾಗ್ಯವಿದೆ. ಇಂದು ಅವರು ಆರಡಿ ಮಣ್ಣಿನೊಳಗಿರುವಾಗ, ಅವರ ಪರಲೋಕ ಜೀವನ ಪ್ರಭಾವಶಾಲಿಯಾಗಲೆಂದು ನಮ್ಮ ಕುಟುಂಬದಿಂದ ಸದಾ ಪ್ರಾರ್ಥನೆ ಇದೆ.
ಅಂತಿಮ ವಿನಂತಿ
ಸುನ್ನತ್ ಜಮಾಅತ್ನ ಎಲ್ಲಾ ನಾಯಕರು, ಕಾರ್ಯಕರ್ತರು, ಸ್ನೇಹಿತರು – ದಯವಿಟ್ಟು ಈ ಅಪಾರ ಕಳುವಿಗೆ ದುಆ ಮೂಲಕ ಸಹಭಾಗಿಯಾಗಬೇಕಾಗಿ ಕೇಳಿಕೊಳ್ಳುತ್ತೇವೆ.
ವರದಿ: UFB ಸೌದಿ ಅರೇಬಿಯಾ






m
