Featured, ಅಂಕಣ, ಸ್ಥಳೀಯ

ರಾಷ್ಟ್ರವ್ಯಾಪಿ ಸುದ್ದಿಯಾದ ಕಡಬ ಪಟ್ಟಣ ಪಂಚಾಯತ್ ಚುನಾವಣೆ

ಕಡಬದಲ್ಲಿ ಹೀಗೊಂದು ಬಿಜೆಪಿ ಮುಕ್ತ ವಾಡ್೯.!!?

ಸಂಪಾದಕೀಯ: ರಶೀದ್ ಜಟ್ಟಿಪಳ

ರಾಷ್ಟ್ರೀಯ ಮಾಧ್ಯಮಗಳಲ್ಲಿ ‘ಕಡಬ’ ಹೆಸರು ಸುದ್ದಿಯಾಗಿದೆ. ಸಂಘ ಪರಿವಾರದ ಭದ್ರ ಕೋಟೆಯೆನಿಸಿಕೊಂಡಿದ್ದ ದಕ್ಷಿಣ ಕನ್ನಡ ದಲ್ಲಿ ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ, ಕಳಾರ್ ವಾರ್ಡ್ನ ಬಿಜೆಪಿ ಅಭ್ಯರ್ಥಿಗೆ ಸೊನ್ನೆ ಮತ ಬೀಳುವುದು ಕೇವಲ ಒಂದು ಚುನಾವಣಾ ಫಲಿತಾಂಶವಲ್ಲ. ಇದೊಂದು ರಾಜಕೀಯ ಸಂಚಲನ. ಇದರ ಆಘಾತ ಮತ್ತು ಪ್ರತಿಧ್ವನಿ ರಾಜ್ಯ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಬಹುಕಾಲ ಉಳಿಯಬಹುದಾದ ಸಂಗತಿಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಯಾವುದೇ ಪ್ರಮುಖ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಒಂದು ಮತವೂ ದೊರಕದ ಸನ್ನಿವೇಶ ಅಪರೂಪ. ಅದೂ ಸಂಘಟನೆಯ ಬಲಿಷ್ಠ ಪ್ರದೇಶದಲ್ಲಿ. ಇದು ಕೇವಲ ಪಕ್ಷದ ಸ್ಥಾನಿಕ ಅಸಫಲತೆಯಲ್ಲ, ಜನಮತದಲ್ಲಿ ಪಕ್ಷದ ನೀತಿ, ನಡವಳಿಕೆ ಮತ್ತು ನೇತೃತ್ವದ ಬಗೆಗೆ ಉಂಟಾಗಿರುವ ಗಂಭೀರ ಅಸಮಾಧಾನದ ಸೂಚ್ಯರ್ಥವಾಗಿದೆ.

ಇದರ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಕೆಲವು ಘಟನೆಗಳು ಗಮನಾರ್ಹ. ಸೌಜನ್ಯ ಹೋರಾಟದಲ್ಲಿ ಪಕ್ಷದ ನಿಲುವು?, ಪುತ್ತೂರು ಬಿಜೆಪಿ ನೇತಾರನ ಮಗನ ಘನಂದಾರಿ ಕೃತ್ಯ ಮತ್ತು ಅಂತಹ ಪ್ರಕರಣಗಳಲ್ಲಿ ಪಕ್ಷದ ನಿಲುವು ಬದ್ಧತೆಯನ್ನು ಪ್ರಶ್ನಿಸುವಂತಹದಾಗಿದೆ. ಸಾಮಾಜಿಕ ನ್ಯಾಯ, ನೈತಿಕತೆ ಮತ್ತು ಸಾಮಾನ್ಯ ಮನುಷ್ಯನ ಸಂವೇದನೆಗಳಿಗೆ ಪಕ್ಷದ ನಡುವೆ ಉಂಟಾಗಿರುವ ‘ಡಿಸ್ಕನೆಕ್ಟ್’ನ ಫಲಿತಾಂಶವೇ ಈ ಸೊನ್ನೆ.

ಕಡಬದ ಮತದಾರರು ತಮ್ಮ ಮತದಾನದ ಮೂಲಕ ಸ್ಪಷ್ಟವಾಗಿ ಒಂದು ಸಂದೇಶವನ್ನು ನೀಡಿದ್ದಾರೆ. ರಾಜಕೀಯ ಪಕ್ಷಗಳು, ಜನಸಾಮಾನ್ಯರಿಂದ ದೂರ ಸರಿಯುವುದು, ಅವರ ಸಮಸ್ಯೆಗಳು ಮತ್ತು ಸಂವೇದನೆಗಳನ್ನು ನಿರ್ಲಕ್ಷಿಸುವುದರಿಂದ ಉಂಟಾದ ಫಲಿತಾಂಶವನ್ನು ಅನುಭವಿಸಲೇ ಬೇಕು. ಆದ್ದರಿಂದ ಭದ್ರಕೋಟೆಯ ಭದ್ರತೆ ಕೀಲಿ ಕೈ ಇರೋದು ಪ್ರಜೆಗಳ ಕೈಯಲ್ಲಿ ಎಂಬುದು ತಿಳಿಯಬೇಕಿದೆ, ಕಡಬದಲ್ಲಿ ಬಿಜೆಪಿ ಅನುಭವಿಸಿದ್ದು ಅದೇ.

ಈ ಘಟನೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಒಂದು ಎಚ್ಚರಿಕೆಯ ಸಂಕೇತವಾಗಿದೆ. ಜನತೆಯು ಯಾವುದೇ ಪಕ್ಷದ ಭದ್ರ ಕೋಟೆಯಲ್ಲ. ಅವರ ಬೆಂಬಲವು ಶಾಶ್ವತವಾಗಿ ಯಾವುದೇ ಒಂದು ಪಕ್ಷಕ್ಕೆ ಅಂಟಿ ಉಳಿಯುವುದಿಲ್ಲ. ನೀತಿ, ನಿಷ್ಠೆ, ಸಮರ್ಪಣೆ ಮತ್ತು ಸಚ್ಚಾರಿತ್ರ್ಯದ ಮೂಲಕ ಮಾತ್ರ ಅದನ್ನು ನಿರಂತರವಾಗಿ ಗಳಿಸಿಕೊಳ್ಳಬೇಕಾಗುತ್ತದೆ.

ಕಡಬದ ಫಲಿತಾಂಶವನ್ನು ಪಕ್ಷಗಳು ಗಂಭೀರವಾಗಿ ವಿಶ್ಲೇಷಿಸಬೇಕು. ಇದು ಮುಂದೆ ಜಿಲ್ಲೆಯ ರಾಜಕೀಯ ವಿದ್ಯಮಾನಗಳ ಮಾರ್ಗದರ್ಶಿಯಾಗಬಹುದು. ಜನಸಾಮಾನ್ಯರೊಂದಿಗೆ ನೇರ ಸಂವಾದವಿಲ್ಲದ, ಅವರ ನಂಬಿಕೆಗೆ ಉತ್ತರವಾಗಿ ನಿಲ್ಲದ ರಾಜಕೀಯವು, ಕಡಬದಲ್ಲಿಯಂತೆ, ಎಲ್ಲೆಡೆ ಸೊನ್ನೆ ಸ್ವೀಕರಿಸಲು ಬಾಕಿ ಇದೆ. ಇದು ಕಡಬದಿಂದ ಕಲಿತ ಪಾಠ.

m

Related Posts