ಇತರೆ

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸುಳ್ಯದಲ್ಲಿ ಗಾಂಧೀ ಜಯಂತಿ, ಲಾಲ್ ಬಹಾದ್ದೂರ್ ಶಾಸ್ತ್ರೀ ಜಯಂತಿ ಆಚರಣೆ

ಗಾಂಧೀಜಿಯವರ ಕನಸಿನ ಭಾರತ ನಮ್ಮ ಪ್ರತಿಜ್ಞೆ ಯಾಗಬೇಕು : ಭರತ್ ಮುಂಡೋಡಿ

ಸುಳ್ಯ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 157ನೇ ಜಯಂತಿ ಹಾಗೂ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ಸುಳ್ಯ ತಾಲೂಕು ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ದೀಪ ಪ್ರಜ್ವಲಿಸಿ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಬಳಿಕ ಸಂದೇಶ ಭಾಷಣ ಮಾಡಿದರು.

“ಯಾವುದೇ ರಾಜಕೀಯ ಉನ್ನತ ಹುದ್ದೆಯನ್ನು ಹೊಂದಿರದ ನಾಯಕ ನಿಧನರಾದ ಸಂದರ್ಭದಲ್ಲಿ ವಿಶ್ವಸಂಸ್ಥೆಯಲ್ಲಿ ಧ್ವಜವನ್ನು ಅರ್ಧಕ್ಕೆ ಇಳಿಸಿ ಸಂತಾಪ ಸೂಚಿಸಿದ ನಿದರ್ಶನ ಬೇರೆ ಇಲ್ಲ. ಗಾಂಧೀಜಿ ಅವರ ವಿಚಾರಧಾರೆಯನ್ನು ಇಡೀ ವಿಶ್ವವೇ ಅಂಗೀಕರಿಸಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ,” ಎಂದು ಭರತ್ ಮುಂಡೋಡಿ ಹೇಳಿದರು. ಕಾರ್ಯಕ್ರಮದಲ್ಲಿ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ ಹಾಗೂ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಾಮೊಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ತಾಲೂಕು ತಹಶೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷೆ ಮಂಜುಳಾ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್. ಹರಗಿ ಉಪಸ್ಥಿತರಿದ್ದರು.ಉಪ ತಹಶೀಲ್ದಾರ್ ಚಂದ್ರಕಾಂತ್ ಸ್ವಾಗತಿಸಿದರು. ಸಿಡಿಪಿಒ ಶೈಲಜಾ ವಂದಿಸಿದರು.