ಇತರೆ

ಗಾಂಧಿ ಜಯಂತಿ ಅಂಗವಾಗಿ ಗಾಂಧಿನಗರ ಅಂಗನವಾಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಸುಳ್ಯ, ಅ. 2: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನವಾದ ಗಾಂಧಿ ಜಯಂತಿಯ ಅಂಗವಾಗಿ ಗಾಂಧಿನಗರ ಅಂಗನವಾಡಿ ಕೇಂದ್ರದ ವತಿಯಿಂದ ಅ. 2ರಂದು ಅಂಗನವಾಡಿ ಕೇಂದ್ರದ ಪರಿಸರದಲ್ಲಿ ವಿಶೇಷ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಶೈನಾಝ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, “ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಸ್ವಚ್ಛತೆಯ ಮಹತ್ವವನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಸ್ವಚ್ಛ ಪರಿಸರದಲ್ಲಿ ಆರೋಗ್ಯಕರ ಮನಸ್ಸು ನೆಲೆಸುತ್ತದೆ” ಎಂದು ಹೇಳಿದರು. ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಕೇಂದ್ರದ ಆವರಣವನ್ನು ಸ್ವಚ್ಛಗೊಳಿಸಿ, ಕಸಕಡ್ಡಿಗಳನ್ನು ತೆರವುಗೊಳಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಯಿತು. ಅಂಗನವಾಡಿ ಮಕ್ಕಳ ಪೋಷಕರು ಹಾಗೂ ಊರಿನ ಹಿತೈಷಿಗಳು ಉತ್ಸಾಹದಿಂದ ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡು ಶ್ರಮದಾನ ಮಾಡಿದರು.

ಸಮುದಾಯದ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮವು ಪರಿಸರ ಸ್ವಚ್ಛತೆಯ ಮಹತ್ವದ ಕುರಿತು ನೆರೆಹೊರೆಯವರಲ್ಲೂ ಅರಿವು ಮೂಡಿಸಿತು.ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುನಿತಾ ಅವರು ಎಲ್ಲರನ್ನು ಸ್ವಾಗತಿಸಿ, ವಂದಿಸಿದರು.