ಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸಾ ತತ್ವಗಳು ಇಂದಿಗೂ ಪ್ರಸ್ತುತ: ಲಕ್ಷ್ಮೀಶ ಗಬ್ಬಲಡ್ಕ
ಎಡಮಂಗಲ: ಪ್ರಜಾಧ್ವನಿ ಕರ್ನಾಟಕ ಹಾಗೂ ಎಡಮಂಗಲ ಸರಕಾರಿ ಪ್ರೌಢಶಾಲೆಯ ಸಹಯೋಗದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಭಾರತದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯನ್ನು ಅ.2ರಂದು ಶಾಲಾ ಆವರಣದಲ್ಲಿ ಆಚರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜನಾರ್ಧನ ಪರ್ಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಬಳಿಕ ಅತಿಥಿಗಳು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ಶಾಲಾ ಮುಖ್ಯಮಂತ್ರಿ ಕು. ಶ್ರೇಯಾ ಅವರು ಸಂವಿಧಾನದ ಪೀಠಿಕೆಯನ್ನು ವಾಚಿಸಿ ಸಭಿಕರಿಗೆ ಬೋಧಿಸಿದರು. ಪ್ರಜಾಧ್ವನಿ ಕರ್ನಾಟಕದ ಸ್ಥಾಪಕ ಸದಸ್ಯ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿರ್ದೇಶಕ ಕೆ.ಪಿ. ಜಾನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಜಾಧ್ವನಿ ಕರ್ನಾಟಕದ ಆಶಯಗಳು ಹಾಗೂ ಸಂಘಟನೆ ನಡೆಸಿಕೊಂಡು ಬರುತ್ತಿರುವ ವಿವಿಧ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಶಾಲಾ ವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿಯವರ ಜೀವನ ಹಾಗೂ ಆದರ್ಶಗಳ ಕುರಿತು ಚುಟುಕು ಭಾಷಣಗಳನ್ನು ಮಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ ಅವರು ಮಹಾತ್ಮ ಗಾಂಧೀಜಿಯವರ ಜೀವನ, ಅವರು ಪ್ರತಿಪಾದಿಸಿದ ಸತ್ಯ, ಶಾಂತಿ ಮತ್ತು ಅಹಿಂಸೆಯ ತತ್ವಗಳ ಕುರಿತು ಮಾತನಾಡಿದರು. ಇಂದಿನ ಕಾಲಘಟ್ಟದಲ್ಲಿಯೂ ಈ ಮೌಲ್ಯಗಳ ಪ್ರಸ್ತುತತೆ ಹಾಗೂ ಮಹತ್ವವನ್ನು ವಿವರಿಸಿದ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಶಾಲೆಯ ಹಿರಿಯ ಶಿಕ್ಷಕ ಆನಂದ ಕೆ.ಎಸ್. ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿ ಹಾಗೂ ಪ್ರಜಾಧ್ವನಿ ಕರ್ನಾಟಕದ ಅಧ್ಯಕ್ಷ ಪ್ರವೀಣ್ ಮುಂಡೋಡಿ ಅವರು ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳನ್ನು ಕೋರಿ, ಸಂಘಟನೆಯ ವತಿಯಿಂದ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜನಾರ್ಧನ ಪರ್ಲ ಅವರು ಅಧ್ಯಕ್ಷೀಯ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಪ್ರಜಾಧ್ವನಿ ಕರ್ನಾಟಕದ ಪದಾಧಿಕಾರಿಗಳು ಹಾಗೂ ಸದಸ್ಯರಾದ ಗೋಪಾಲ್ ಪೆರಾಜೆ, ಮೋಹನ್ ಕೆ.ಪಿ. ಕಡಬ, ಶಿವಶಂಕರ್ ಕಡಬ, ಮಹೇಶ್ ಬೆಳ್ಳಾರ್ಕರ್, ಅಶ್ರಫ್ ಸಾಹುಕಾರ್, ಭರತ್ ಕುಕ್ಕುಜಡ್ಕ ಹಾಗೂ ಕೇಶವ ಮೊರಂಗಲ್ಲು, ಶಾಲಾ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕು. ಸಮನ್ವಿ ಕೆ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕು. ಸುಪ್ರಿಯಾ ಎ. ವಂದಿಸಿದರು. ಅಧ್ಯಾಪಕ ಡಾ. ಸಂತೋಷ ಎಸ್.ಪಿ. ಅವರು ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಬಳಿಕ ಪ್ರಜಾಧ್ವನಿ ಕರ್ನಾಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.



