ಇತರೆ

ಸುಳ್ಯ ಬಿಜೆಪಿ ವತಿಯಿಂದ ‘ವಿಕಸಿತ ಭಾರತ’ ಸಂಕಲ್ಪದ ಬೀದಿ ನಾಟಕಕ್ಕೆ ಗುಂಡ್ಯದಲ್ಲಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಆಡಳಿತ ಸೇವೆ ಹಾಗೂ ಜನ್ಮದಿನದ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮ

ಸುಳ್ಯ, ಆಕ್ಟೋಬರ್. 12: ಭಾರತೀಯ ಜನತಾ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸುದೀರ್ಘ ಸಾರ್ವಜನಿಕ ಆಡಳಿತ ಸೇವೆ ಹಾಗೂ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಒಂದು ತಿಂಗಳ ಸೇವಾ ಚಟುವಟಿಕೆಗಳ ಭಾಗವಾಗಿ,‘2047 ವಿಕಸಿತ ಭಾರತ ಸಂಕಲ್ಪ’ ದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶನಕ್ಕೆ ಗುಂಡ್ಯದಲ್ಲಿ ಚಾಲನೆ ನೀಡಲಾಯಿತು.

ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಈ ಬೀದಿ ನಾಟಕದ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರ, ಸಾಮಾಜಿಕ ಹೊಣೆಗಾರಿಕೆ, ರಾಷ್ಟ್ರ ನಿರ್ಮಾಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಹಾಗೂ ವಿಕಸಿತ ಭಾರತದ ಗುರಿ ಸಾಧನೆಗೆ ಅಗತ್ಯವಿರುವ ಸಾಮೂಹಿಕ ಪರಿಶ್ರಮದ ಕುರಿತು ಜಾಗೃತಿ ಮೂಡಿಸಲಾಯಿತು.

 

ಗುಂಡ್ಯದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದ ಬಳಿಕ ಬೀದಿ ನಾಟಕದ ಮೊದಲ ಪ್ರದರ್ಶನ ನಡೆಯಿತು. ಸಾರ್ವಜನಿಕರಿಗೆ ಸುಲಭವಾಗಿ ತಲುಪುವ ಕಲಾ ಮಾಧ್ಯಮದ ಮೂಲಕ ದೇಶದ ಪ್ರಗತಿ, ಸೇವಾ ಮನೋಭಾವ ಹಾಗೂ ಅಭಿವೃದ್ಧಿಯ ಸಂಕಲ್ಪವನ್ನು ಜನರಿಗೆ ತಲುಪಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಸಚಿವ ಎಸ್. ಅಂಗಾರ, ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವಾರ, ಜಿಲ್ಲಾ ಕಾರ್ಯದರ್ಶಿ ಪುಷ್ಪ ಮೆದಪ್ಪ, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಪ್ರಸನ್ನ ಮಾರ್ತ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ರೈ ಮನವಳಿಕೆ, ವಿನಯ್ ಕಂದಡ್ಕ, ವಿಕಾಸ್ ಪುತ್ತೂರು, ಯುವಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ಸೇರಿದಂತೆ ಮಹಾಶಕ್ತಿಕೇಂದ್ರ ಅಧ್ಯಕ್ಷರು, ಶಕ್ತಿಕೇಂದ್ರ ಪ್ರಮುಖರು, ಬೂತ್ ಸಮಿತಿ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.