Featured, ಅಂತರಾಜ್ಯ

ನೆಡುಂಬಸ್ಸೇರಿ ಮಿನಿ ಕೂಪರ್ ಅಪಘಾತ: ಆರೋಪಿ ಸುಹೇಲ್ ಚಾಲನಾ ಪರವಾನಗಿ ರದ್ದತಿಗೆ ಕ್ರಮ; ಇನ್ನಿಬ್ಬರ ಬಂಧನ

ಮದ್ಯಪಾನ ಬಳಿಕ ಅತಿವೇಗದ ಚಾಲನೆ ಆರೋಪ; ಅಪಘಾತದ ನಂತರ ವ್ಯಾಗನ್‌ಆರ್ ಕಾರಿನಲ್ಲಿ ಪರಾರಿ — ಜೊತೆಗಿದ್ದವರ ಮೇಲೂ ಪ್ರಕರಣ 

ಕೊಚ್ಚಿ: ನೆಡುಂಬಸ್ಸೇರಿಯಲ್ಲಿ ಸಂಭವಿಸಿದ ಮಿನಿ ಕೂಪರ್ ಕಾರು ಅಪಘಾತ ಪ್ರಕರಣದ ಆರೋಪಿ ಸುಹೇಲ್ ಸಜೀವ್ ಅವರ ಚಾಲನಾ ಪರವಾನಗಿಯನ್ನು ರದ್ದುಗೊಳಿಸುವ ಪ್ರಕ್ರಿಯೆಗೆ ಮೋಟಾರು ವಾಹನ ಇಲಾಖೆ ಮುಂದಾಗಿದೆ.

ಅಪಘಾತದ ವೇಳೆ ಕಾರು ಅತಿವೇಗದಲ್ಲಿ ಸಂಚರಿಸುತ್ತಿದ್ದ ದೃಶ್ಯಾವಳಿಗಳನ್ನು ಮೋಟಾರು ವಾಹನ ಇಲಾಖೆ ಪರಿಶೀಲಿಸಲಿದೆ. ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ವರದಿ ಲಭ್ಯವಾದ ಬಳಿಕ ಚಾಲನಾ ಪರವಾನಗಿ ರದ್ದುಗೊಳಿಸುವ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.

ಘಟನೆಯ ವೇಳೆ ಸುಹೇಲ್ ಸಜೀವ್ ಜೊತೆ ಇನ್ನೂ ಮೂವರು ಇದ್ದರೆನ್ನಲಾಗಿದ್ದು, ಅವರ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಅಪಘಾತಕ್ಕೂ ಮುನ್ನ ವಿವಿಧ ಬಾರ್‌ಗಳಿಗೆ ತೆರಳಿ ಒಟ್ಟಿಗೆ ಮದ್ಯ ಸೇವಿಸಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಅಪಘಾತ ಸಂಭವಿಸಿದ ಬಳಿಕ ಆರೋಪಿಗಳು ಸಮೀಪದಲ್ಲೇ ನಿಲ್ಲಿಸಿದ್ದ ವ್ಯಾಗನ್‌ಆರ್ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದರು ಎನ್ನಲಾಗಿದೆ.

ಸುಹೇಲ್ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದಾನೆ ಎಂಬುದು ತಿಳಿದಿದ್ದರೂ ಆತನನ್ನು ತಡೆಯದೆ, ಅತಿವೇಗದ ಚಾಲನೆಗೂ ಕಡಿವಾಣ ಹಾಕದೆ ಪ್ರಚೋದನೆ ನೀಡಿದ ಆರೋಪವನ್ನು ಜೊತೆಯಲ್ಲಿದ್ದವರ ವಿರುದ್ಧ ಹೊರಿಸಲಾಗಿದೆ.

ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆಯಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

Related Posts