ಸುಳ್ಯ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಸುದ್ದಿ ಸಮೂಹ ಸಂಸ್ಥೆಗಳು ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ಘಟಕದ ಸಹಯೋಗದಲ್ಲಿ ‘ಅಂದವಾದ ಕೈಬರಹ ಸ್ಪರ್ಧೆ’ ಆಯೋಜಿಸಲಾಗಿದ್ದು, ಆಸಕ್ತರಿಂದ ಕೈಬರಹಗಳನ್ನು ಆಹ್ವಾನಿಸಲಾಗಿದೆ.
ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಹೆಚ್ಚಿಸುವುದರೊಂದಿಗೆ ಸುಂದರ ಹಾಗೂ ಸ್ಪಷ್ಟ ಕೈಬರಹಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸುಳ್ಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ನಿವಾಸಿಗಳು ಹಾಗೂ ಪರವೂರಿನಲ್ಲಿ ನೆಲೆಸಿರುವ ಸುಳ್ಯದವರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ವಿಧಾನ:
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಈ ವಾರದ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟಗೊಂಡ ಯಾವುದಾದರೂ ಒಂದು ವರದಿಯ ಮೂರು ಪ್ಯಾರಾಗಳನ್ನು ಅಥವಾ ಕನಿಷ್ಠ ಹತ್ತು ವಾಕ್ಯಗಳನ್ನು ಬಿಳಿ ಹಾಳೆಯ ಮೇಲೆ ಸುಂದರವಾಗಿ, ಸ್ಪಷ್ಟವಾಗಿ ಕೈಬರಹದಲ್ಲಿ ಬರೆಯಬೇಕು. ಬಳಿಕ ಕೈಬರಹ ಸ್ಪಷ್ಟವಾಗಿ ಕಾಣುವಂತೆ ಛಾಯಾಚಿತ್ರ ತೆಗೆದು ವಾಟ್ಸಾಪ್ ಸಂಖ್ಯೆ 7019406288ಕ್ಕೆ ಕಳುಹಿಸಬೇಕು.
ಸ್ವೀಕರಿಸಲಾದ ಕೈಬರಹಗಳ ಪೈಕಿ ಅತ್ಯುತ್ತಮವಾದವುಗಳನ್ನು ಆಯ್ಕೆ ಮಾಡಿ, ಆಯ್ಕೆಯಾದ ಸ್ಪರ್ಧಿಗಳಿಗಾಗಿ ಅಂತಿಮ ಸುತ್ತಿನ ಸ್ಪರ್ಧೆಯನ್ನು ಸುಳ್ಯದಲ್ಲಿ ನಡೆಸಲಾಗುವುದು.
ಅಂತಿಮ ಸುತ್ತಿನಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಿಗಳಿಗೂ ಪ್ರಮಾಣಪತ್ರ ವಿತರಿಸಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಕೈಬರಹಗಳನ್ನು ಕಳುಹಿಸಲು ಅಕ್ಟೋಬರ್ 27 ಕೊನೆಯ ದಿನವಾಗಿದೆ. ಕೈಬರಹದೊಂದಿಗೆ ಸ್ಪರ್ಧಿಗಳು ತಮ್ಮ ಹೆಸರು, ಪೂರ್ಣ ವಿಳಾಸ ಹಾಗೂ ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ 9901288280 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.