ಕಾಸರಗೋಡು: ಅಧೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಯಾರ್ ಕಟ್ಟಿಪ್ಪಳಂನಲ್ಲಿ ಸೋಮವಾರ ಮಧ್ಯರಾತ್ರಿ ಯುವಕನೊಬ್ಬ ಗುಂಡೇಟಿನಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಮಂಜಕ್ಕಲ್ ಕಟ್ಟಿಪ್ಪಳಂ ನಿವಾಸಿ ಹೈದರ್ ಅಲಿ (27) ಎಂದು ಗುರುತಿಸಲಾಗಿದೆ.
ಸೋಮವಾರ ಮಧ್ಯರಾತ್ರಿ ಸುಮಾರು 12.10ರ ವೇಳೆಗೆ ಕಟ್ಟಿಪ್ಪಳಂನ ಬೋರ್ವೆಲ್ ಸಮೀಪ ಹೈದರ್ ಅಲಿ ತಮ್ಮ ಸ್ಕೂಟರ್ ಬಳಿ ನೆಲದಲ್ಲಿ ಬಿದ್ದಿರುವುದನ್ನು ಅವರ ಸ್ನೇಹಿತ ಮುಹಮ್ಮದ್ ರಮೀಜ್ ಗಮನಿಸಿದ್ದಾರೆ. ಕೂಡಲೇ ಅವರು ಮತ್ತೊಬ್ಬ ಸ್ನೇಹಿತ ಅಜೀರ್ಗೆ ಮಾಹಿತಿ ನೀಡಿದ್ದು, ಇಬ್ಬರೂ ಸೇರಿ ಹೈದರ್ ಅಲಿಯನ್ನು ಚೆರ್ಕಳ ಸಮೀಪದ ಪೊವ್ವಲ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಹೈದರ್ ಅಲಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಅವರ ದೇಹದಲ್ಲಿ ಗುಂಡೇಟಿನ ಗಾಯಗಳು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಹೈದರ್ ಅಲಿ ಮೃತಪಟ್ಟಿದ್ದ ಸ್ಥಳದ ಸಮೀಪದಿಂದ ಬೇಟೆಯಾಡಲು ಬಳಸುವ ಬಂದೂಕೊಂದನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಅಧೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಯುವಕನಿಗೆ ಗುಂಡೇಟು ಹೇಗೆ ತಗುಲಿತು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.