Featured, ಇತರೆ

ರಾಜಸ್ಥಾನ ಪಂಚಾಯತ್ ಚುನಾವಣೆ : ಬಿಜೆಪಿ ಭದ್ರಕೋಟೆಗಳಲ್ಲೇ ಕಾಂಗ್ರೆಸ್‌ ಅಬ್ಬರ

ಬಿಜೆಪಿಗೆ ಭಾರೀ ಹಿನ್ನಡೆ: 2028ರ ವಿಧಾನಸಭಾ ಚುನಾವಣೆಗೆ ಹೊಸ ರಾಜಕೀಯ ಮುನ್ಸೂಚನೆ..?

ಜೈಪುರ: ರಾಜಸ್ಥಾನದ ಪಂಚಾಯತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಭಾರೀ ಹಿನ್ನಡೆಯಾಗಿದ್ದು, ಕಾಂಗ್ರೆಸ್ ಸ್ಥಳೀಯ ಮಟ್ಟದಲ್ಲಿ ಗಮನಾರ್ಹ ಮುನ್ನಡೆ ಸಾಧಿಸಿದೆ. ರಾಜ್ಯದ ಹಲವು ಬಿಜೆಪಿ ಪ್ರಾಬಲ್ಯದ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

37 ಜಿಲ್ಲಾ ಪಂಚಾಯತ್‌ಗಳ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ 24ರಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ ಎಂಟು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ನಾಲ್ಕು ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ಇತರ ಪಕ್ಷಗಳ ಪೈಕಿ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (RLP) ಪಂಚಾಯತ್ ಸಮಿತಿಯಲ್ಲಿ 354 ಸ್ಥಾನಗಳು ಹಾಗೂ ಎರಡು ಜಿಲ್ಲಾ ಪಂಚಾಯತ್ ಸ್ಥಾನಗಳನ್ನು ಗೆದ್ದಿದೆ ಎಂದು ವರದಿಯಾಗಿದೆ. ಭಾರತ್ ಆದಿವಾಸಿ ಪಕ್ಷ (BAP) 168 ಸ್ಥಾನಗಳನ್ನು, ಸಿಪಿಐ(ಎಂ) 43 ಪಂಚಾಯತ್ ಸಮಿತಿ ಹಾಗೂ ಮೂರು ಜಿಲ್ಲಾ ಪಂಚಾಯತ್ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಬಿಎಸ್‌ಪಿ 36 ಪಂಚಾಯತ್ ಸಮಿತಿ ಸ್ಥಾನಗಳನ್ನು ಮತ್ತು ಆಮ್ ಆದ್ಮಿ ಪಕ್ಷ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ.

ರಾಜಸ್ಥಾನದ ಒಟ್ಟು 41 ಜಿಲ್ಲೆಗಳಲ್ಲಿ 7,543 ಪಂಚಾಯತ್ ಸಮಿತಿ ಸ್ಥಾನಗಳು ಹಾಗೂ 1,275 ಜಿಲ್ಲಾ ಪಂಚಾಯತ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಪ್ರಸ್ತುತ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇತ್ತೀಚಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ಪಂಚಾಯತ್ ಚುನಾವಣೆಯ ಫಲಿತಾಂಶ ಅನಿರೀಕ್ಷಿತ ಹಿನ್ನಡೆಯಾಗಿದೆ. ಮತ್ತೊಂದೆಡೆ, ಕಾಂಗ್ರೆಸ್‌ನ ಈ ಸಾಧನೆ 2028ರ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸುವ ಸಾಧ್ಯತೆಯಿದೆ.

ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್‌ನ ಹೆಚ್ಚುತ್ತಿರುವ ಪ್ರಭಾವವು ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ. ಗ್ರಾಮೀಣ ಭಾಗದಲ್ಲಿ ತನ್ನ ಸಂಘಟನಾತ್ಮಕ ಬಲ ಮತ್ತು ಆಡಳಿತದ ಕಾರ್ಯವೈಖರಿಯನ್ನು ಮರುಪರಿಶೀಲಿಸುವ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ.

Related Posts