ಜೈಪುರ: ರಾಜಸ್ಥಾನದ ಪಂಚಾಯತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಅನಿರೀಕ್ಷಿತ ಹಿನ್ನಡೆಯಾಗಿದ್ದು, ಎಡಪಕ್ಷವಾದ ಸಿಪಿಎಂ ಗಮನಾರ್ಹ ಸಾಧನೆ ಮಾಡಿದೆ. ಪಂಚಾಯತ್ ಸಮಿತಿ ಚುನಾವಣೆಯಲ್ಲಿ 50 ಸ್ಥಾನಗಳನ್ನು ಗೆದ್ದಿರುವ ಸಿಪಿಎಂ, ಐದು ಜಿಲ್ಲಾ ಪಂಚಾಯತ್ ಸ್ಥಾನಗಳನ್ನೂ ತನ್ನದಾಗಿಸಿಕೊಂಡಿದೆ. ಬಿಜೆಪಿಯ ಪ್ರಾಬಲ್ಯವಿರುವ ಚುರು ಜಿಲ್ಲೆಯಲ್ಲೂ ಖಾತೆ ತೆರೆಯುವ ಮೂಲಕ ಸಿಪಿಎಂ ತನ್ನ ರಾಜಕೀಯ ಬಲವನ್ನು ಪ್ರದರ್ಶಿಸಿದೆ.
ಇದೇ ವೇಳೆ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್ಎಲ್ಪಿ) 354 ಪಂಚಾಯತ್ ಸಮಿತಿ ಸ್ಥಾನಗಳು ಹಾಗೂ ಎರಡು ಜಿಲ್ಲಾ ಪಂಚಾಯತ್ ಸ್ಥಾನಗಳನ್ನು ಗೆದ್ದು ಗಮನ ಸೆಳೆದಿದೆ. ಭಾರತ್ ಆದಿವಾಸಿ ಪಕ್ಷ (ಬಿಎಪಿ) ಕೂಡ 168 ಪಂಚಾಯತ್ ಸಮಿತಿ ಸ್ಥಾನಗಳನ್ನು ಗೆದ್ದು ಉತ್ತಮ ಸಾಧನೆ ಮಾಡಿದೆ.
ಬಹುಜನ ಸಮಾಜ ಪಕ್ಷ (ಬಿಎಸ್ಪಿ) 36 ಪಂಚಾಯತ್ ಸಮಿತಿ ಸ್ಥಾನಗಳನ್ನು ಗೆದ್ದಿದ್ದರೆ, ಆಮ್ ಆದ್ಮಿ ಪಕ್ಷ (ಎಎಪಿ) ಎರಡು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.
ರಾಜಸ್ಥಾನದ ಒಟ್ಟು 41 ಜಿಲ್ಲೆಗಳಲ್ಲಿ ನಡೆದ ಈ ಚುನಾವಣೆಯಲ್ಲಿ 7,543 ಪಂಚಾಯತ್ ಸಮಿತಿ ಸ್ಥಾನಗಳು ಹಾಗೂ 1,275 ಜಿಲ್ಲಾ ಪಂಚಾಯತ್ ಸ್ಥಾನಗಳಿಗೆ ಮತದಾನ ನಡೆದಿತ್ತು.
ಅಕ್ಟೋಬರ್ 22, 28, ನವೆಂಬರ್ 3 ಮತ್ತು 14ರಂದು ಒಟ್ಟು ನಾಲ್ಕು ಹಂತಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿತ್ತು.
ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ, ಪಂಚಾಯತ್ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದ ಸಾಧನೆ ಮಾಡಲು ವಿಫಲವಾಗಿದೆ. ಮತ್ತೊಂದೆಡೆ, ಸಿಪಿಎಂ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿರುವುದು ರಾಜಸ್ಥಾನದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.