ಮಂಗಳೂರು, ನ.20: ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಬೆಳ್ತಂಗಡಿ ಮೂಲದ ಮುಸ್ಲಿಂ ಯುವತಿಯನ್ನು ಆಕೆಯ ಕುಟುಂಬಸ್ಥರೇ ಕಾಲೇಜು ಕ್ಯಾಂಪಸ್‌ನಿಂದ ಬಲವಂತವಾಗಿ ಜೀಪಿನಲ್ಲಿ ಕರೆದೊಯ್ದಿರುವ ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ
ಕಾಲೇಜು ಕ್ಯಾಂಪಸ್‌ನಿಂದ ಯುವತಿಯನ್ನು ಬಲವಂತವಾಗಿ ಕರೆದೊಯ್ಯುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದರು.
ಇದರಂತೆ, ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸೆಕ್ಯೂರಿಟಿ ಮ್ಯಾನೇಜರ್ ಇಮ್ಮಿಯಾಝ್ ಅವರು ನೀಡಿದ ದೂರಿನ ಆಧಾರದಲ್ಲಿ ಅಪಹರಣ ಪ್ರಕರಣ ದಾಖಲಿಸಲಾಗಿದೆ.
ಯುವತಿ ಮಂಗಳೂರಿನ ದಂತ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಾಗಲಕೋಟೆ ಮೂಲದ ಹಿಂದೂ ವಿದ್ಯಾರ್ಥಿಯೊಬ್ಬನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಸುಮಾರು ಒಂದು ವರ್ಷದ ಹಿಂದೆ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪರಿಚಯವಾಗಿ, ಬಳಿಕ ಸ್ನೇಹ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಈ ವಿಚಾರ ಯುವತಿಯ ಕುಟುಂಬಸ್ಥರಿಗೆ ತಿಳಿದ ಬಳಿಕ ವಿರೋಧ ವ್ಯಕ್ತವಾಗಿತ್ತು.
ನ.19ರ ಗುರುವಾರ ಮಧ್ಯಾಹ್ನ ಕಾಲೇಜು ಕ್ಯಾಂಪಸ್‌ನಲ್ಲಿದ್ದ ಯುವತಿಯನ್ನು 3-4 ಮಂದಿ ಯುವಕರ ತಂಡವೊಂದು ತಡೆದು, ಕಪ್ಪು ಬಣ್ಣದ ಥಾರ್ ಜೀಪಿನಲ್ಲಿ ಬಲವಂತವಾಗಿ ಕರೆದೊಯ್ದಿತ್ತು. ಈ ವೇಳೆ ಯುವತಿ ಜೋರಾಗಿ ಕೂಗಿ ವಿರೋಧ ವ್ಯಕ್ತಪಡಿಸಿದರೂ, ಆಕೆಯನ್ನು ಜೀಪಿನೊಳಗೆ ಹಾಕಿ ಬಾಗಿಲು ಮುಚ್ಚಿ ಕರೆದೊಯ್ಯಲಾಗಿತ್ತು. ಘಟನೆಯ ದೃಶ್ಯವನ್ನು ಅಲ್ಲಿದ್ದ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು.
ಮರುದಿನ ಯುವತಿ ಕಾಲೇಜಿಗೆ ಹಾಜರಾಗದ ಹಿನ್ನೆಲೆಯಲ್ಲಿ, ಆಕೆಯನ್ನು ಅಪರಿಚಿತರು ಬಲವಂತವಾಗಿ ಕರೆದೊಯ್ದಿರುವುದಾಗಿ ಸೆಕ್ಯೂರಿಟಿ ಮ್ಯಾನೇಜರ್ ಇಮ್ಮಿಯಾಝ್ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 126(2), 140(3) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ, ಯುವತಿಯನ್ನು ಕೇರಳದಲ್ಲಿರುವ ಸಂಬಂಧಿಕರ ಮನೆಯಲ್ಲಿ ಪತ್ತೆಹಚ್ಚಲಾಗಿದೆ. ಆಕೆ ತನ್ನ ಕುಟುಂಬದವರೊಂದಿಗೆ ತೆರಳಲು ಇಚ್ಛಿಸುವುದಿಲ್ಲ ಎಂದು ತಿಳಿಸಿದ್ದಾಳೆ. ಯುವತಿ ಪ್ರಾಪ್ತವಯಸ್ಕಳಾಗಿರುವುದರಿಂದ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಹಕ್ಕು ಹೊಂದಿದ್ದಾಳೆ. ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಕರೆದೊಯ್ಯುವುದು ಕಾನೂನುಬಾಹಿರವಾಗಿದೆ ಎಂದು ತಿಳಿಸಿದ್ದಾರೆ.