Featured, ಇತರೆ

ಮುಸ್ಲಿಂ ಯೂತ್ ಅಸೋಸಿಯೇಷನ್ ಚುನಾವಣೆ ದಿನಾಂಕ ತಕ್ಷಣ ಘೋಷಿಸಿ: SDPI ಆಗ್ರಹ

13 ವರ್ಷಗಳ ಬಳಿಕ ಬೈಲಾ ತಿದ್ದುಪಡಿಗೆ ವಕ್ಫ್ ಮಂಡಳಿ ಅನುಮೋದನೆ; ಚುನಾವಣೆಗೆ ಮತ್ತಷ್ಟು ವಿಳಂಬ ಬೇಡ

ದೊಡ್ಡಬಳ್ಳಾಪುರ, ನ.21: ನಗರದ ಮುಸ್ಲಿಂ ಯೂತ್ ಅಸೋಸಿಯೇಷನ್ (ಅಂಜುಮನ್) ಸಮಿತಿಯ ಬೈಲಾ ತಿದ್ದುಪಡಿಗೆ ರಾಜ್ಯ ವಕ್ಫ್ ಮಂಡಳಿಯು ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ, ಸಮಿತಿಯ ಚುನಾವಣಾ ದಿನಾಂಕವನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣ ಘೋಷಿಸಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ದೊಡ್ಡಬಳ್ಳಾಪುರ ಘಟಕ ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ SDPI ಪದಾಧಿಕಾರಿಗಳು, ಮುಸ್ಲಿಂ ಯೂತ್ ಅಸೋಸಿಯೇಷನ್ ಸಮಿತಿಯ ಬೈಲಾ ತಿದ್ದುಪಡಿಗೆ ಅನುಮೋದನೆ ನೀಡಲು ರಾಜ್ಯ ವಕ್ಫ್ ಮಂಡಳಿಯು ಬರೋಬ್ಬರಿ 13 ವರ್ಷಗಳ ಸುದೀರ್ಘ ಕಾಲಾವಕಾಶ ತೆಗೆದುಕೊಂಡಿರುವುದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದೀಗ ಬೈಲಾ ತಿದ್ದುಪಡಿಗೆ ಅನುಮೋದನೆ ದೊರೆತಿರುವುದರಿಂದ ಚುನಾವಣಾ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಬೇಕು. ಇಲ್ಲವಾದಲ್ಲಿ ಚುನಾವಣೆಗೆ ಇನ್ನೆಷ್ಟು ವರ್ಷ ಕಾಯಬೇಕಾಗುತ್ತದೆ ಎಂಬ ಆತಂಕ ಸಮುದಾಯದ ಸದಸ್ಯರು ಹಾಗೂ ಸಾರ್ವಜನಿಕರಲ್ಲಿ ಮೂಡಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ 13 ವರ್ಷಗಳಿಂದ ಚುನಾವಣೆ ನಡೆಯದಿರುವುದರಿಂದ ಸಮಿತಿಯ ಆಡಳಿತಾತ್ಮಕ ಹಾಗೂ ಸಂಘಟನಾತ್ಮಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಆದ್ದರಿಂದ ರಾಜ್ಯ ವಕ್ಫ್ ಮಂಡಳಿಯು ಇನ್ನು ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ, ಮುಸ್ಲಿಂ ಯೂತ್ ಅಸೋಸಿಯೇಷನ್ (ಅಂಜುಮನ್), ದೊಡ್ಡಬಳ್ಳಾಪುರ ಸಮಿತಿಯ ಚುನಾವಣಾ ವೇಳಾಪಟ್ಟಿ ಹಾಗೂ ನಿಖರ ದಿನಾಂಕವನ್ನು ಕೂಡಲೇ ಅಧಿಕೃತವಾಗಿ ಘೋಷಿಸಬೇಕು ಎಂದು SDPI ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.