Featured, ಇತರೆ

ಹಿಜಾಬ್ ಅಥವಾ ಬುರ್ಖಾ ಧರಿಸುವಂತೆ, ಧರಿಸದಂತೆ ಯಾರನ್ನೂ ಒತ್ತಾಯಿಸಬಾರದು: ಶಬಾನಾ ಅಜ್ಮಿ

ಧಾರ್ಮಿಕ ಆಚರಣೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸದಿದ್ದರೂ ಸಾಂಸ್ಕೃತಿಕವಾಗಿ ತಾನು ಮುಸ್ಲಿಂ 

ಮುಂಬೈ: ಹಿಜಾಬ್ ಮತ್ತು ಬುರ್ಖಾ ಧರಿಸುವುದು ವೈಯಕ್ತಿಕ ಆಯ್ಕೆಯಾಗಿರಬೇಕು. ಅದನ್ನು ಧರಿಸುವಂತೆ ಅಥವಾ ಧರಿಸದಂತೆ ಯಾರ ಮೇಲೂ ಒತ್ತಡ ಹೇರಬಾರದು ಎಂದು ಹಿರಿಯ ಬಾಲಿವುಡ್ ನಟಿ ಶಬಾನಾ ಅಜ್ಮಿ ಅಭಿಪ್ರಾಯಪಟ್ಟಿದ್ದಾರೆ.

ವರ್ಷಗಳಿಂದ ಸಾರ್ವಜನಿಕ ಚರ್ಚೆಯ ವಿಷಯವಾಗಿರುವ ಹಿಜಾಬ್ ಮತ್ತು ಬುರ್ಖಾ ವಿವಾದದ ಕುರಿತು ಉಷಾ ಕಾಕಡೆ ಅವರೊಂದಿಗಿನ ಪಾಡ್‌ಕ್ಯಾಸ್ಟ್ ಸಂದರ್ಶನದಲ್ಲಿ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಧಾರ್ಮಿಕ ಆಚರಣೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸದಿದ್ದರೂ ಸಾಂಸ್ಕೃತಿಕವಾಗಿ ತಾನು ಮುಸ್ಲಿಂ ಎಂದು ಗುರುತಿಸಿಕೊಳ್ಳುವುದಾಗಿ ಹೇಳಿರುವ ಶಬಾನಾ ಅಜ್ಮಿ, ಕುರಾನ್‌ನಲ್ಲಿ ಬುರ್ಖಾ ಧರಿಸುವುದನ್ನು ಕಡ್ಡಾಯಗೊಳಿಸಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಧಾರ್ಮಿಕ ಬೋಧನೆಗಳನ್ನು ಕೆಲವು ಮಧ್ಯವರ್ತಿಗಳು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಕುರಾನ್ ಮಹಿಳೆಯರು ಕಡ್ಡಾಯವಾಗಿ ಮುಸುಕು ಧರಿಸಬೇಕೆಂದು ಹೇಳುತ್ತದೆ ಎಂಬ ವಾದ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ನಾನು ಬುರ್ಖಾ ಧರಿಸುವುದಿಲ್ಲ. ಆದರೆ ಯಾರಾದರೂ ಬುರ್ಖಾ ಧರಿಸಬಾರದು ಎಂದು ನನಗೆ ಹೇಳಿದರೆ, ನಾನು ಮೂರು ಬುರ್ಖಾಗಳನ್ನು ಒಟ್ಟಿಗೆ ಧರಿಸುತ್ತೇನೆ. ನನ್ನ ಉಡುಗೆ ತೊಡುಗೆಯ ಬಗ್ಗೆ ನಿರ್ಧರಿಸಲು ನೀವ್ಯಾರು?” ಎಂದು ಪ್ರಶ್ನಿಸಿರುವ ಅವರು, ವ್ಯಕ್ತಿಯ ಉಡುಗೆ ತೊಡುಗೆ ವೈಯಕ್ತಿಕ ಸ್ವಾತಂತ್ರ್ಯದ ವಿಚಾರವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಅದೇ ವೇಳೆ, ಜಾತ್ಯತೀತತೆಯ ಹೆಸರಿನಲ್ಲಿ ಮೂಲಭೂತವಾದಕ್ಕೆ ಅವಕಾಶ ನೀಡಬಾರದು ಎಂದೂ ಶಬಾನಾ ಅಜ್ಮಿ ಎಚ್ಚರಿಸಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಆಯ್ಕೆಯನ್ನು ಗೌರವಿಸುವುದರ ಜೊತೆಗೆ ಮೂಲಭೂತವಾದದ ವಿರುದ್ಧವೂ ಎಚ್ಚರಿಕೆ ವಹಿಸಬೇಕೆಂಬುದು ಅವರ ನಿಲುವಾಗಿದೆ.