ದೆಹಲಿ: ಭಾರತ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಖಂಡಿತವಾಗಿಯೂ ಕಡಿಮೆ ಮಾಡಲಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 2 ರಿಂದ ಅಮೆರಿಕದ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಪರಸ್ಪರ ಸುಂಕಗಳನ್ನು ಹೆಚ್ಚಿಸುವುದಾಗಿ ಟ್ರಂಪ್ ಎಚ್ಚರಿಕೆ ಹೇಳಿಕೆ ನೀಡಿದ್ದರು.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್, “ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಆದರೆ ಒಂದೇ ಸಮಸ್ಯೆ ಎಂದರೆ ಭಾರತ ವಿಶ್ವದಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶ. ಅವರು ಬಹುಶಃ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಕಡಿಮೆ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ ಏಪ್ರಿಲ್ 2 ರಂದು ಭಾರತ ನಮಗೆ ವಿಧಿಸುವ ಅದೇ ಸುಂಕಗಳನ್ನು ನಾವು ಅವರಿಗೂ ವಿಧಿಸುತ್ತೇವೆ” ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವುದು ಕಷ್ಟಕರವಾಗಿರುವುದರಿಂದ ಭಾರತವು ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲು ಒಪ್ಪಿಕೊಂಡಿದೆ ಎಂದು ಟ್ರಂಪ್ ಈ ತಿಂಗಳ ಆರಂಭದಲ್ಲಿ ಹೇಳಿದ್ದರು.
ಈ ಮದ್ಯೆ ವಾಣಿಜ್ಯ ಕಾರ್ಯದರ್ಶಿ ಸುನಿಲ್ ಪಾರ್ಥ್ವಾಲ್ ಈಗಾಗಲೇ ಈ ವಿಷಯದ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಸಂಸದೀಯ ಸಮಿತಿಯೊಂದಿಗೆ ಚರ್ಚೆಗಳು ನಡೆಯುತ್ತಿವೆ ಮತ್ತು ಅಮೇರಿಕನ್ ಸರಕುಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವ ಬಗ್ಗೆ ಇನ್ನೂ ಯಾವುದೇ ಒಪ್ಪಂದಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.




m

